ದೇಶ

ಕೊರೋನಾ ಲಾಕ್ ಡೌನ್: ದೆಹಲಿಯ ಲೈಂಗಿಕ ಕಾರ್ಯಕರ್ತರನ್ನು ಕಾಡುತ್ತಿದೆ ಏಕಾಂಗಿತನ, ಭಯ, ಹಸಿವು!

Lingaraj Badiger

ನವದೆಹಲಿ: ಕೊರೋನಾ ಲಾಕ್ ಡೌನ್ ಎಫೆಕ್ಟ್ ಈಗ ಲೈಂಗಿಕ ಕಾರ್ಯಕರ್ತರಿಗೂ ತಟ್ಟಿದ್ದು, ದೆಹಲಿಯ ಜಿಬಿ ರಸ್ತೆಯ ಲೈಂಗಿಕ ಕಾರ್ಯಕರ್ತರಿಗೆ ಏಕಾಂಗಿತನ, ಭಯ ಮತ್ತು ಹಸಿವು ತೀವ್ರವಾಗಿ ಕಾಡುತ್ತಿದೆ.

ಕಳೆದ ಒಂದು ವಾರದಿಂದ ಯಾವುದೇ ಗಿರಾಕಿಗಳು ಬರದ ಹಿನ್ನೆಲೆಯಲ್ಲಿ ಇಲ್ಲಿನ ಇಕ್ಕಟ್ಟಾದ ಬಹು-ಅಂತಸ್ತಿನ ವೇಶ್ಯಾಗೃಹಗಳಲ್ಲಿರುವ ಲೈಂಗಿಕ ಕಾರ್ಯಕರ್ತರು ತರಕಾರಿ ಖರೀದಿಸಲು ಸಹ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

ನಾನು ಜಾಸ್ತಿ ತರಕಾರಿ ತೆಗೆದುಕೊಳ್ಳುವುದಿಲ್ಲ. ಸ್ವಲ್ಪವೇ ತೆಗೆದುಕೊಳ್ಳುತ್ತೇನೆ. ಆದರೆ ಹಣ ಆಮೇಲೆ ಕೊಡುತ್ತೇನೆ ಎಂದು ಬೇಡಿಕೊಂಡರೂ ತರಕಾರಿಯವರು ನಮಗೆ ತರಕಾರಿ ನೀಡುತ್ತಿಲ್ಲ ಎಂದು 54 ವರ್ಷದ ಸವಿತಾ ಎಂಬ ಲೈಂಗಿಕ ಕಾರ್ಯಕರ್ತೆ ತನ್ನ ಅಳಲು ತೋಡಿಕೊಂಡಿದ್ದಾರೆ.

ಮಾರ್ಚ್ 24ರಂದು ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಿದ ನಂತರ ಸವಿತಾರಂತೆ ಹಲವು ಲೈಂಗಿಕ ಕಾರ್ಯಕರ್ತೆಯರ ಬಳಿ ಹಣ ಇಲ್ಲ. ಇಂದಿರಾ ಗಾಂಧಿ ಅವರ ಪುತ್ರ ದೇಶದ ಪ್ರಧಾನಿಯಾಗಿದ್ದಾಗಿನಿಂದ, ಸುಮಾರು ಮೂರು ದಶಗಳಿಂದ ನಾನು ಇಲ್ಲಿಯೇ ಇದ್ದೇನೆ. ಆದರೆ ಇಂತಹ ಪರಿಸ್ಥಿತಿ ನಮಗೆ ಯಾವತ್ತೂ ಬಂದಿರಲಿಲ್ಲ ಎಂದು ಬಿಹಾರದ ದರ್ಭಾಂಗ್ ಜಿಲ್ಲೆಯ ಸವಿತಾ ಹೇಳಿದ್ದಾರೆ.

ಕೊರೋನಾ ವೈರಸ್ ಮಾರಣಾಂತಿಕ ಅಂತ ನಮಗೆ ಗೊತ್ತು. ಹೀಗಾಗಿ ನಾವು ಸಹ ಕೊರೋನಾ ವೈರಸ್ ನಿಯಂತ್ರಿಸಲು ಸರ್ಕಾರದ ಆದೇಶಗಳನ್ನು ಪಾಲಿಸುತ್ತಿದ್ದೇವೆ. ಆದರೆ ಈ ಲಾಕ್ ಡೌನ್ ನಿಂದಾಗಿ ನಮಗೆ ಹಣ ಸಂಪಾದಿಸಲು ಆಗುತ್ತಿಲ್ಲ. ನಾವು ಹೇಗೆ ಜೀವನ ಮಾಡುವುದು? ಸರ್ಕಾರ ಏಕೆ ನಮಗೆ ಸಹಾಯ ಮಾಡುತ್ತಿಲ್ಲ? ಎಂದು ಸವಿತಾ ಪ್ರಶ್ನಿಸಿದ್ದಾರೆ.

ಕೆಲವು ಎನ್ ಜಿಒಗಳು ಮತ್ತು ಪೊಲೀಸರು ನಮಗೆ ಆಹಾರ ಮತ್ತು ರೇಷನ್ ನೀಡುತ್ತಿದ್ದಾರೆ. ಆದರೆ ಅದು ಕೆಲವು ಜನಕ್ಕೆ ಮಾತ್ರ ಸಾಕಾಗುತ್ತಿದೆ. ಸರ್ಕಾರ ಅಧಿಕೃತವಾಗಿ ಲಾಕ್ ಡೌನ್ ಘೋಷಿಸುವ ಮುನ್ನವೇ ನಾವು ನಮ್ಮ ಕೆಲಸ ನಿಲ್ಲಿಸಿದ್ದೇವೆ. ಈಗಾಗಲೇ ನಮ್ಮ ಬಳಿ ಇದ್ದ ಎಲ್ಲಾ ಹಣವೂ ಖರ್ಚಾಗಿದೆ. ಈಗ ಆಂಧ್ರ ಪ್ರದೇಶದಲ್ಲಿರುವ ನನ್ನ ಮಕ್ಕಳಿಗೆ ಹಣ ಕಳುಹಿಸಲು ಸಾಧ್ಯವಾಗುತ್ತಿಲ್ಲ ಎಂದು ಬೇಬಿ ಎಂಬ ಮಹಿಳೆ ಹೇಳಿದ್ದಾರೆ.

ಬೇಬಿ ಮತ್ತು ಸವಿತಾರಂತೆ ಹಲವು ಲೈಂಗಿಕ ಕಾರ್ಯಕರ್ತರಿಗೆ ಮಕ್ಕಳಿದ್ದು, ಅವರು ತಮ್ಮ ಕುಟುಂಬ ನಿರ್ವಹಣೆಗಾಗಿ ಈ ವೃತ್ತಿ ಮಾಡುತ್ತಿದ್ದಾರೆ. ತಿರುಪತಿಯ ರಿಟಾ, ನೇಪಾಳದ ಆಶಾ, ಪಶ್ಚಿಮ ಬಂಗಾಳದ ಮಂಜು ಹಾಗೂ ಮಹಾರಾಷ್ಟ್ರಗ ಗೌರಿ ಸೇರಿದಂತೆ ಹಲವು ಮಹಿಳೆಯರು 21 ದಿನಗಳ ಲಾಕ್ ಡೌನ್ ನಲ್ಲಿ ಹೇಗೆ ಜೀವನ ಮಾಡುವುದು ಎಂಬ ಆತಂಕದಲ್ಲಿದ್ದಾರೆ.

SCROLL FOR NEXT