ದೇಶ

ವಿಶೇಷ ವಿಮಾನ ಬಳಸಿ ಭಾರತದಿಂದ ಕಾಲ್ಕೀಳಲು ಯತ್ನಿಸಿ ಸಿಕ್ಕಿಬಿದ್ದ ಮಲೇಷ್ಯಾದ 8 ತಬ್ಲಿಘಿಗಳು! 

Srinivas Rao BV

ನವದೆಹಲಿ: ನಿಜಾಮುದ್ದೀನ್ ನಲ್ಲಿ ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಮಲೇಷ್ಯಾದ 8 ತಬ್ಲಿಘಿಗಳನ್ನು ವಿಮಾನ ನಿಲ್ದಾಣದಲ್ಲಿ ಹಿಡಿಯಲಾಗಿದೆ 
  
ಭಾರತದಲ್ಲಿ ಸಿಲುಕಿಕೊಂಡಿರುವ ಮಲೇಷ್ಯಾದ ನಾಗರಿಕರಿಗೆ ವ್ಯವಸ್ಥೆ ಮಾಡಲಾಗಿದ್ದ ವಿಶೇಷ ವಿಮಾನದ ಮೂಲಕ ಮಲೇಷ್ಯಾಗೆ ಪರಾರಿಯಾಗಲು 8 ಮಂದಿ ತಬ್ಲಿಘಿಗಳು ಯತ್ನಿಸುತ್ತಿದ್ದರು. ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತಬ್ಲಿಘಿಗಳನ್ನು ವಲಸೆ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. 

ದೆಹಲಿಯ ಎನ್ಆರ್ ಸಿ ಪ್ರದೇಶದಲ್ಲಿ ಈ 8 ಮಂದಿ ತಬ್ಲಿಘಿಗಳು ಅಡಗಿ ಕುಳಿತಿದ್ದರು, ಮಲೇಷ್ಯಾದ ಹೈ ಕಮಿಷನ್ ಅವರ ನಾಗರಿಕರನ್ನು ಭಾರತದಿಂದ ವಾಪಸ್ ಕರೆಸಿಕೊಳ್ಳುವುದಕ್ಕೆ ವ್ಯವಸ್ಥೆ ಮಾಡಲಾಗಿದ್ದ ವಿಶೇಷ ವಿಮಾನದಲ್ಲಿ ಸಂಚರಿಸಲು ಯತ್ನಿಸುತ್ತಿದ್ದರು. 

ತಬ್ಲಿಘಿ ಜಮಾನ್ ನಲ್ಲಿ ಭಾಗವಹಿಸಲು ವಿದೇಶದಿಂದ ಬಂದಿದ್ದ ತಬ್ಲಿಘಿ ಸದಸ್ಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರ ಎಲ್ಲಾ ರಾಜ್ಯಗಳ ಪೊಲೀಸರಿಗೂ ಸ್ಪಷ್ಟ ಸಂದೇಶ ರವಾನೆ ಮಾಡಿದೆ. ಈ ಹಿನ್ನೆಲೆಯಲ್ಲಿ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದ 8 ಮಲೇಷ್ಯಾದ ತಬ್ಲಿಘಿಗಳನ್ನು ಬಂಧಿಸಲಾಗಿದೆ. 

ವೀಸಾ ನಿಯಮಗಳನ್ನು ಉಲ್ಲಂಘಿಸಿ ಭಾರತಕ್ಕೆ ಆಗಮಿಸಿ, ತಬ್ಲಿಘಿ ಜಮಾತ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 960 ವಿದೇಶಿಗರನ್ನು ಭಾರತ ಸರ್ಕಾರ ಈಗಾಗಲೇ ಕಪ್ಪು ಪಟ್ಟಿಗೆ ಸೇರಿಸಿದೆ. ಈಗ ಬಂಧಿಸಲಾಗಿರುವ ಮಲೇಷ್ಯಾದ 8 ತಬ್ಲಿಘಿಗಳನ್ನು ಅಧಿಕಾರಿಗಳು ದೆಹಲಿ ಕ್ರೈಮ್ ಬ್ರಾಂಚ್ ಪೊಲೀಸರಿಗೆ ಒಪ್ಪಿಸಿದ್ದಾರೆ.

SCROLL FOR NEXT