ಚೆನ್ನೈ: ದೇಶದಾದ್ಯಂತ ಮರಣ ಮೃದಂಗ ಬಾರಿಸುತ್ತಿರುವ ಕೊರೋನಾ ವೈರಸ್ ವಿರುದ್ಧ ತಮಿಳುನಾಡು ಸರ್ಕಾರ ಭಾರೀ ಕಾರ್ಯಾಚರಣೆ ನಡೆಸಲು ಮುಂದಾಗಿದ್ದು, ಚೆನ್ನೈ ನಗರದಲ್ಲಿರುವ ಪರತೀ ಮನೆ ತಪಾಸಣೆ ಮಾಡಲು ನಿರ್ಧಾರ ಕೈಗೊಂಡಿದೆ.
ಇಂದಿನಿಂದಲೇ ಈ ಕಾರ್ಯಾಚರಣೆ ಆರಂಭವಾಗಿದ್ದು, 90 ದಿನಗಳ ಕಾಲ ಮುಂದುವರೆಯಲಿದೆ. ಕಾರ್ಯಾಚರಣೆಗೆ ತಮಿಳುನಾಡು ಸರ್ಕಾರ ಈಗಾಗಲೇ 16,000 ಸಿಬ್ಬಂದಿಗಳನ್ನು ನಿಯೋಜನೆಗೊಳಿಸಿದೆ.
ಚೆನ್ನೈ ನಗರದಲ್ಲಿ ಒಟ್ಟು 10 ಲಕ್ಷ ಮನೆಗಳಿದ್ದೂ, ಪ್ರತೀ ಮನೆಯಲ್ಲೂ ತಪಾಸಣೆ ನಡೆಸಿ, ಸೋಂಕಿತ ವ್ಯಕ್ತಿಗಳನ್ನು ಪತ್ತೆ ಹಚ್ಚರು ಕಾರ್ಯಾಚರಣೆ ಆರಂಭಿಸಲಾಗಿದೆ.
ಒಂದು ವೇಳೆ ಜನರಲ್ಲಿ ಸಾಮಾನ್ಯವಾದ ಶೀತ, ನೆಗಡಿ, ಕೆಮ್ಮು ಕಂಡು ಬಂದಿದ್ದರೆ, ಸಿಬ್ಬಂದಿಗಳೇ ಚಿಕಿತ್ಸಾ ಸಲಹೆಗಳನ್ನು ನೀಡಲಿದ್ದಾರೆ. ಒಂದು ವೇಳೆ ಲಕ್ಷಣಗಳೂ ತೀವ್ರವಾಗಿದ್ದರೆ, ಸ್ಥಳೀಯ ಆಸ್ಪತ್ರೆಗಳಿಗೆ ಶಿಫಾರಸ್ಸು ಮಾಡುತ್ತಾರೆ. ಕಾರ್ಯಾಚರಣೆ ನಡೆಸುವ ಪ್ರತೀ ಸಿಬ್ಬಂದಿಗೂ ಸರ್ಕಾರ ರೂ.15,000 ನೀಡಲಿದೆ. ಈಗಾಗಲೇ ಸಿಬ್ಬಂದಿಗಳಿಗೆ 11.5 ಲಕ್ಷ ಮಾಸ್ಕ್ ಗಳನ್ನೂ ನೀಡಿದೆ ಎಂದು ವರದಿಗಳು ತಿಳಿಸಿವೆ.