ದೇಶ

ಏ.14 ರ ನಂತರವೂ ಮುಂದುವರೆಯಲಿದೆ ಲಾಕ್ ಡೌನ್?: ಸಲಹೆ ಪರಿಗಣಿಸಿರುವ ಕೇಂದ್ರ ಸರ್ಕಾರ!

Srinivas Rao BV

ನವದೆಹಲಿ: ದೇಶಾದ್ಯಂತ ಕೊರೋನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸೋಂಕು ತಡೆಗಟ್ಟುವ ವಿಷಯದಲ್ಲಿ ಹೆಚ್ಚಿನ ಸುಧಾರಣೆ ಕಂಡುಬಂದಿಲ್ಲ. ಈ ಹಿನ್ನೆಲೆಯಲ್ಲಿ ಏ.14 ರ ನಂತರವೂ ದೇಶಾದ್ಯಂತ ಲಾಕ್ ಡೌನ್ ಮುಂದುವರೆಸುವ ಬಗ್ಗೆ ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. 

ಲಾಕ್ ಡೌನ್ ಮುಂದುವರೆಸುವುದರ ಪರವಾಗಿ ಕೇಂದ್ರ ಸರ್ಕಾರಕ್ಕೆ ಹಲವಾರು ರಾಜ್ಯ ಸರ್ಕಾರಗಳು ಮನವಿ ಮಾಡಿದ್ದು, ರಾಜ್ಯಗಳ ಮನವಿಯನ್ನು ಕೇಂದ್ರ ಸರ್ಕಾರ ಪರಿಗಣಿಸಿದೆ ಎಂಬ ಮಾಹಿತಿ ಸರ್ಕಾರಿ ಮೂಲಗಳಿಂದ ಲಭ್ಯವಾಗಿದೆ. 

ಲಾಕ್ ಡೌನ್ ಮುಂದುವರೆಸುವ ಬಗ್ಗೆ ಈ ವರೆಗೂ ಕೇಂದ್ರ ಸರ್ಕಾರ ಯಾವುದೇ ಅಧಿಕೃತ ನಿರ್ಧಾರ ಕೈಗೊಂಡಿಲ್ಲ. ಕೊರೋನಾ ವೈರಸ್ ಹರಡುವಿಕೆಯನ್ನು ತಡೆಗಟ್ಟಲು ಮಾ.25 ರಿಂದ ಏ.14 ವರೆಗೆ ದೇಶಾದ್ಯಂತ 21 ದಿನಗಳ ಲಾಕ್ ಡೌನ್ ಈಗಾಗಲೇ ಘೋಷಣೆಯಾಗಿದೆ. 

ವಿಶ್ವಾದ್ಯಂತ 75,800 ಜೀವಹಾನಿ ಕೊರೋನಾ ವೈರಸ್ ನಿಂದ ಸಂಭವಿಸಿದ್ದು 183 ರಾಷ್ಟ್ರಗಳಲ್ಲಿ ಒಟ್ಟಾರೆ 13.5 ಲಕ್ಷ ಜನರು ಸೋಂಕಿತರಿದ್ದಾರೆ. 

ಲಾಕ್ ಡೌನ್ ಮುಂದುವರೆಸುವ ಸಂಬಂಧ ರಾಜ್ಯ ಸರ್ಕಾರಗಳಷ್ಟೇ ಅಲ್ಲದೇ ತಜ್ಞರು ಸಹ ಕೇಂದ್ರಕ್ಕೆ ಸಲಹೆ ನೀಡಿದ್ದು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ ಎಂದು ಸರ್ಕಾರಿ ಮೂಲಗಳು ಹೇಳಿವೆ.

SCROLL FOR NEXT