ದೇಶ

ಹೈಡ್ರೋಕ್ಸಿಕ್ಲೋರಿಕ್ವಿನ್ ಕೊರತೆ ಇಲ್ಲ, ಉಂಟಾಗುವುದೂ ಇಲ್ಲ: ಆರೋಗ್ಯ ಸಚಿವಾಲಯದ ಸ್ಪಷ್ಟನೆ 

Srinivas Rao BV

ನವದೆಹಲಿ: ಕೊರೋನಾ ತಡೆಗೆ ವಿಧಿಸಲಾಗಿರುವ 21 ದಿನಗಳ ಲಾಕ್ ಡೌನ್ ಕೊನೆಯ ವಾರಕ್ಕೆ ಬಂದಿದ್ದು, ಅಧಿಕಾರಿಗಳಿಗೆ ಸವಾಲಿನ ಸಮಯವಾಗಿದೆ. 

ದೇಶಾದ್ಯಂತ ವೈದ್ಯಕೀಯ ಸೌಲಭ್ಯದ ಲಭ್ಯತೆ ಬಗ್ಗೆ ಏ.08 ರಂದು ಆರೋಗ್ಯ ಸಚಿವಾಲಯ ಮಾಹಿತಿ ನೀಡಿದ್ದು, ಕೊರೋನಾ ಸೋಂಕು ನಿಯಂತ್ರಣಕ್ಕೆ ತಾತ್ಕಾಲಿಕವಾಗಿ ಬಳಕೆ ಮಾಡಲಾಗುತ್ತಿರುವ ಔಷಧ ಹೈಡ್ರೋಕ್ಸಿಕ್ಲೋರಿಕ್ವಿನ್ ಲಭ್ಯತೆಯಲ್ಲಿ ಕೊರತೆ ಇಲ್ಲ, ಮುಂದಕ್ಕೆ ಉಂಟಾಗುವುದೂ ಇಲ್ಲ, ಪರಿಸ್ಥಿತಿಯ ಮೇಲೆ ಉನ್ನತ ಮಟ್ಟದಲ್ಲಿ ನಿಗಾವಹಿಸಲಾಗಿದೆ ಎಂದು ಆರೋಗ್ಯ ಇಲಾಖೆ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ತಿಳಿಸಿದ್ದಾರೆ. 

ಕೊರೋನಾ ಸೋಂಕು ಬಾಧಿತ ಭಾರತದ ನೆರೆ ರಾಷ್ಟ್ರಗಳು ಸೋಂಕಿತರಿಗೆ ಚಿಕಿತ್ಸೆ ನೀಡುವುದಕ್ಕೆ ಬಳಕೆ ಮಾಡಲಾಗುತ್ತಿರುವ ಹೈಡ್ರಾಕ್ಸಿಕ್ಲೋರಿಕ್ವಿನ್ ಔಷಧಕ್ಕಾಗಿ ಭಾರತದ ಮೇಲೆ ಅವಲಂಬಿತವಾಗಿದ್ದವು, ನೆರೆ ರಾಷ್ಟ್ರಗಳಷ್ಟೇ ಅಲ್ಲದೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಹ ಈ ಔಷಧದ ರಫ್ತಿನ ಮೇಲೆ ವಿಧಿಸಲಾಗಿರುವ ನಿರ್ಬಂಧ ತೆರವುಗೊಳಿಸಬೇಕೆಂದು ಭಾರತಕ್ಕೆ ಮನವಿ ಮಾಡಿದ್ದರು. 

ನೆರೆ ರಾಷ್ಟ್ರಗಳು, ಮಿತ್ರ ರಾಷ್ಟ್ರಗಳ ಮನವಿಗೆ ಸ್ಪಂದಿಸಿದ ಭಾರತ ಹೈಡ್ರಾಕ್ಸಿಕ್ಲೊರಿಕ್ವಿನ್ ಔಷಧವನ್ನು ಕಳಿಸಿಕೊಟ್ಟಿತ್ತು. ಈ ಹಿನ್ನೆಲೆಯಲ್ಲಿ ಔಷಧದ ಲಭ್ಯತೆ ಬಗ್ಗೆ ಪ್ರಶ್ನೆಗಳು ಉದ್ಭವವಾಗಿತ್ತು. 

ಇನ್ನು ಭಾರತದ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ಬಗ್ಗೆಯೂ ಮಾಹಿತಿ ನೀಡಿರುವ ಆರೋಗ್ಯ ಸಚಿವಾಲಯ, ಕಳೆದ 24 ಗಂಟೆಗಳಲ್ಲಿ 773 ಪ್ರಕರಣಗಳು ಪತ್ತೆಯಾಗಿವೆ. 24 ಗಂಟೆಗಳಲ್ಲಿ 32 ಸಾವು ಸಂಭವಿಸಿದ್ದು ಸಾವಿನ ಸಂಖ್ಯೆ 149 ಕ್ಕೆ ಏರಿಕೆಯಾಗಿದೆ. ಒಟ್ಟಾರೆ ಸೋಂಕಿತರ ಸಂಖ್ಯೆ 5,194 ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದೆ. 

SCROLL FOR NEXT