ದೇಶ

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಕೊರೋನಾಗೆ 17 ಮಂದಿ ಬಲಿ, ಒಟ್ಟು 166 ಸಾವು, 5,734 ಮಂದಿ ಸೋಂಕಿತರು

Sumana Upadhyaya

ನವದೆಹಲಿ: ಕೋವಿಡ್-19 ಸೋಂಕಿಗೆ ತುತ್ತಾಗುವವರ ಸಂಖ್ಯೆ ಭಾರತದಲ್ಲಿ ಹೆಚ್ಚಾಗುತ್ತಲೇ ಇದೆ. ಕಳೆದ 24 ಗಂಟೆಗಳಲ್ಲಿ 17 ಮಂದಿ ಮೃತಪಟ್ಟಿದ್ದು ದೇಶದಲ್ಲಿ ಸಾವಿನ ಸಂಖ್ಯೆ 166ಕ್ಕೇರಿದೆ.

ಸೋಂಕಿತರ ಸಂಖ್ಯೆ ದೇಶದಲ್ಲಿ ನಿನ್ನೆ 5 ಸಾವಿರದ 734ಕ್ಕೆ ಏರಿಕೆಯಾಗಿದೆ ಎಂದು ಸರ್ಕಾರದ ಆರೋಗ್ಯ ಸಚಿವಾಲಯದ ಅಂಕಿಅಂಶ ತಿಳಿಸಿದೆ. ಇಲ್ಲಿಯವರೆಗೆ ದೇಶದಲ್ಲಿ 473 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ.

ಏಪ್ರಿಲ್ 14ರ ನಂತರವೂ ಲಾಕ್ ಡೌನ್ ಮುಂದುವರಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದ್ದು ನಿರ್ಬಂಧವನ್ನು ಹಂತ ಹಂತವಾಗಿ ಸಡಿಲಿಸುವ ಆಲೋಚನೆಯಲ್ಲಿದೆ. ದೇಶದ ಹಲವು ನಗರಗಳನ್ನು ಕೆಲ ದಿನಗಳ ಮಟ್ಟಿಗೆ ಸಂಪೂರ್ಣವಾಗಿ ಮುಚ್ಚಲು ಸರ್ಕಾರ ರೆಡ್ ಹಾಟ್ ಸ್ಪಾಟ್ ಎಂದು ಗುರುತಿಸಿದೆ.

ಇನ್ನೊಂದೆಡೆ ನಿನ್ನೆ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿ ಕೋವಿಡ್-19 ಪರೀಕ್ಷೆಯನ್ನು ಅನುಮೋದಿತ ಸರ್ಕಾರಿ ಮತ್ತು ಖಾಸಗಿ ಪ್ರಯೋಗಾಲಯಗಳಲ್ಲಿ ಉಚಿತವಾಗಿ ಮಾಡಬೇಕೆಂದು ಹೇಳಿದೆ.

ಕೊರೋನಾವನ್ನು ತಡೆಗಟ್ಟಲು ಮುಂಬೈ, ದೆಹಲಿ, ಉತ್ತರ ಪ್ರದೇಶ, ಜಮ್ಮು-ಕಾಶ್ಮೀರಗಳಲ್ಲಿ ಮನೆಯಿಂದ ಹೊರಗೆ ಹೋಗುವಾಗ ನಾಗರಿಕರು ಮಾಸ್ಕ್ ಗಳನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಹೇಳಿದೆ.

ಇಂದು ಕೇಂದ್ರ ಆರೋಗ್ಯ ಸಚಿವಾಲಯದಲ್ಲಿ ಕೋವಿಡ್-19 ಬಗ್ಗೆ ಸಚಿವರ ಮಧ್ಯೆ ಮತ್ತೊಂದು ಸಭೆ ನಡೆಯಲಿದೆ.  

SCROLL FOR NEXT