ದೇಶ

ಕೋವಿಡ್-19: ಟಿಕ್ ಟಾಕ್ 'ಮನೆಮದ್ದಿ'ನಿಂದ 10 ಮಂದಿ ಆಸ್ಪತ್ರೆಗೆ!

Nagaraja AB

ಚಿತ್ತೂರು: ಕೊರೋನಾವೈರಸ್  ತಡೆಗಟ್ಟುವಿಕೆಗೆ  ಸಂಬಂಧಿಸಿದಂತೆ ಟಿಕ್ ಟಾಕ್ ವೊಂದರಲ್ಲಿ ಬಂದ ಸಲಹೆಗಳು ಹಾಗೂ ಮನೆಮದ್ದು ಅನುಸರಿಸಲು ಹೋಗಿ 10 ಮಂದಿ ಆಸ್ಪತ್ರೆ ಪಾಲಾಗಿದ್ದು, ನಂತರ ಬಿಡುಗಡೆ ಹೊಂದಿರುವ ಘಟನೆ ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯಲ್ಲಿ ನಡೆದಿದೆ.

ಕೋವಿಡ್-19  ವಿರುದ್ಧ ಹೋರಾಡಲು ಅವೈಜ್ಞಾನಿಕ ಪರಿಹಾರಗಳನ್ನು ನಂಬಬೇಡಿ ಎಂದು ರಾಜ್ಯ ಮತ್ತು ಕೇಂದ್ರ ಆರೋಗ್ಯ ಇಲಾಖೆಗಳ ಹಲವಾರು ಸಲಹೆಗಾರರು ಮತ್ತು ವೈದ್ಯರು ಸಾರ್ವಜನಿಕರಿಗೆ ಮನವಿ ಮಾಡಿದರೂ, ಗ್ರಾಮೀಣ ಪ್ರದೇಶದ ಜನರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಮೋಸದ ತಂತ್ರಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.

ಚಿತ್ತೂರು ಜಿಲ್ಲೆಯ ಬೈರೆಡ್ಡಿಪಲ್ಲಿ ಮಂಡಲದ ಅಲಾಪಲ್ಲಿ ಗ್ರಾಮದ ಎರಡು ಕುಟುಂಬಗಳು ಕೊರೋನಾವೈರಸ್ ಸೋಂಕು ಹರಡದಂತೆ ತಡೆಗಟ್ಟುತ್ತದೆ ಎಂಬ ನಂಬಿಕೆಯಿಂದ ದತ್ತೂರಿ ಬೀಜಗಳಿಂದ ಮಾಡಿದ ಜ್ಯೂಸ್  ಕುಡಿದಿದ್ದಾರೆ. 

ದತ್ತೂರಿ ಬೀಜದ ರಸವನ್ನು ಕುಡಿದರೆ ಕೊರೋನಾವೈರಸ್ ಓಡಿ ಹೋಗುತ್ತದೆ ಎಂದು ಹೇಳುವ ಟಿಕ್ ಟಾಕ್ ವಿಡಿಯೋವನ್ನು ಈ ಎರಡು ಕುಟುಂಬಗಳ 10 ಜನರು ವೀಕ್ಷಿಸಿರುವುದಾಗಿ  ಬೈರೆಡ್ಡಿಪಲ್ಲಿ ಸಬ್ ಇನ್ಸ್ ಪೆಕ್ಟರ್ ಮುನಿಸ್ವಾಮಿ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ದತ್ತೂರಿ ಬೀಜಗಳಿಂದ ಮಾಡಿದ ಜ್ಯೂಸ್ ಕುಡಿದ ನಂತರ ಅವರೆಲ್ಲರೂ ಅನಾರೋಗ್ಯಕ್ಕೀಡಾಗಿದ್ದಾರೆ. ಇದನ್ನು ನೋಡಿದ ನೆರೆಹೊರೆಯವರು ಸಮೀಪದ ಆಸ್ಪತ್ರೆಗೆ ಸೇರಿದ್ದಾರೆ. ಚಿಕಿತ್ಸೆ ನೀಡಿದ ಬಳಿಕ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ. 

ಮನೆಮದ್ದುಗಳು ವೈದ್ಯಕೀಯ ತಜ್ಞರಿಂದ ದೃಢಪಟ್ಟಿರುವುದಿಲ್ಲ, ಅಂತಹ ವದಂತಿಗಳನ್ನು ಜನರು ನಂಬಬಾರದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಂ. ಪೆಂಚಾಲಯ್ಯ ಮನವಿ ಮಾಡಿದ್ದಾರೆ. 

ಕೋವಿಡ್-19ಗೆ ಇನ್ನೂ ಯಾವುದೇ ಲಸಿಕೆ ಕಂಡುಹಿಡಿದಿಲ್ಲ, ಪ್ರಯೋಗಗಳು ಇನ್ನೂ ಮುಂದುವರೆದಿವೆ.ಮನೆಯಲ್ಲಿಯೇ ಇದ್ದು ಸುರಕ್ಷಿತವಾಗಿರಿ, ಆರೋಗ್ಯ ಇಲಾಖೆ ನೀಡಿರುವ ಸೂಚನೆಗಳನ್ನು ಪಾಲಿಸಿ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿಕೊಂಡಿದ್ದಾರೆ. 

ಕೊರೋನಾವೈರಸ್ ತಡೆಗಟ್ಟುವಲ್ಲಿ ದೇಶಿಯ ಮದ್ಯ ಒಳ್ಳೆಯ ಮದ್ದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ಬೆನ್ನಲ್ಲೇ ಮಾರಾಟಗಾರರು ಮದ್ಯದ ಬೆಲೆಯನ್ನು ದುಪ್ಪಟ್ಟು ಮಾಡಿರುವ ಘಟನೆಯೂ ಅಲ್ಲಲ್ಲಿ ನಡೆದಿದೆ.

SCROLL FOR NEXT