ದೇಶ

ಪಂಜಾಬ್:ಪಟಿಯಾಲದ ತರಕಾರಿ ಮಾರುಕಟ್ಟೆಯಲ್ಲಿ ಪೊಲೀಸರ ಮೇಲೆ ಹಲ್ಲೆ ನಡೆಸಿದ 7 ಮಂದಿ ನಿಹಾಂಗರ ಬಂಧನ

Sumana Upadhyaya

ಚಂಡೀಗಢ: ಪಟಿಯಾಲ ಹತ್ತಿರ ಸನೌರ್ ತರಕಾರಿ ಮಾರುಕಟ್ಟೆಯಲ್ಲಿ ಎಎಸ್ ಐ ಮತ್ತು ಇತರ ಪೊಲೀಸ್ ಸಿಬ್ಬಂದಿ ಮೇಲೆ ನಿಹಾಂಗ್ಸ್ (ಸಿಖ್ ಧರ್ಮೀಯರ ಗುಂಪು) ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಲ್ಲಾ ಏಳು ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಮಚ್ಚು, ಲಾಂಗ್ ಮತ್ತು ಕಬ್ಬಿಣದ ಸಲಾಕೆಗಳನ್ನು ತುಂಬಿಸಿಕೊಂಡು ವಾಹನದಲ್ಲಿ ಇಂದು ನಸುಕಿನ ಜಾವ ಐವರು ನಿಹಾಂಗರ ಗುಂಪು ಪ್ರಯಾಣಿಸುತ್ತಿದ್ದರು. ಅವರನ್ನು ಸನೌರ್ ತರಕಾರಿ ಮಾರುಕಟ್ಟೆ ಬಳಿ ಪಂಜಾಬ್ ಪೊಲೀಸರು ಮತ್ತು ಪಂಜಾಬ್ ಮಂಡಿ ಮಂಡಳಿ ಅಧಿಕಾರಿಗಳು ತಡೆದು ನಿಲ್ಲಿಸಿದರು. ಪಾಸ್ ತೋರಿಸಿ ಎಂದು ಕೇಳಿದ್ದಕ್ಕೆ ಸಿಟ್ಟಿನಿಂದ ವಾಹನವನ್ನು ನುಗ್ಗಿಸಿ ಪೊಲೀಸ್ ಬ್ಯಾರಿಕೇಡ್ ಮುರಿದು ಒಳಹೋದರು. ಪೊಲೀಸರು ಅವರನ್ನು ಸುತ್ತುವರಿದಾಗ ಅವರ ಮೇಲೆಯೇ ದಾಳಿ ನಡೆಸಿದರು. ಅವರಲ್ಲಿ ಒಬ್ಬ ಎಎಸ್ಐ ಹರ್ಜೀತ್ ಸಿಂಗ್ ಅವರ ಕೈಗಳನ್ನು ಆಯುಧಗಳಿಂದ ಕತ್ತರಿಸಿದರೆ ಉಳಿದವರು ಪೊಲೀಸರ ಗುಂಪಿನ ಮೇಲೆ ದಾಳಿ ಮಾಡಿದರು.

ಸದರ್ ಪಟಿಯಾಲಾ ಪೊಲೀಸ್ ಠಾಣೆಯ ಸ್ಟೇಷನ್ ಹೌಸ್ ಅಧಿಕಾರಿ ಮತ್ತು ಮತ್ತೊಬ್ಬ ಅಧಿಕಾರಿಗೆ ಗಾಯಗಳಾಗಿವೆ. ಪೊಲೀಸರ ಮೇಲೆ ದಾಳಿ ಮಾಡಿ ನಿಹಂಗರು ಅಲ್ಲಿಂದ ಕಾಲ್ಕಿತ್ತರು.ಪೊಲೀಸರ ತಂಡ ದುಷ್ಕರ್ಮಿಗಳನ್ನು ಬೆನ್ನಟ್ಟಿ ಕಿಚ್ರಿ ಸಾಹಿಬ್ ಗುರುದ್ವಾರ ಬಳಿ ಹೋದರು. ಅಲ್ಲಿ ಸ್ವಲ್ಪ ಹೊತ್ತು ಗಲಭೆ ನಡೆಯಿತು. ಗುರುದ್ವಾರವನ್ನು ಸುತ್ತುವರಿದ ಪೊಲೀಸರು ಆರೋಪಿಗಳನ್ನು ಶರಣಾಗುವಂತೆ ಸೂಚಿಸಿದರು. ಆಗ ಎಲ್ಲಾ 7 ಮಂದಿ ನಿಹಾಂಗರನ್ನು ಬಂಧಿಸಿ ಪೊಲೀಸ್ ಕಸ್ಟಡಿಗೊಪ್ಪಿಸಲಾಯಿತು ಎಂದು ಪಟಿಯಾಲದ ಹಿರಿಯ ಪೊಲೀಸ್ ಸೂಪರಿಂಟೆಂಡೆಂಟ್ ಮಂದೀಪ್ ಸಿಂಗ್ ಸಿಧು ತಿಳಿಸಿದ್ದಾರೆ.

SCROLL FOR NEXT