ದೇಶ

'ನೀವು ಎಲ್ಲಿದ್ದೀರಿ, ಅಲ್ಲೇ ಸುರಕ್ಷಿತವಾಗಿರಿ, ಈ ಪರಿಸ್ಥಿತಿಯಲ್ಲಿ ಭಾರತಕ್ಕೆ ಬರಬೇಡಿ: ಸುಪ್ರೀಂ ಕೋರ್ಟ್

Sumana Upadhyaya

ನವದೆಹಲಿ: ಭಾರತಕ್ಕೆ ಬರಲು ಸಾಧ್ಯವಾಗದೆ ಅಲ್ಲಲ್ಲೇ ಸಿಲುಕಿಹಾಕಿಕೊಂಡಿರುವ ಜನರು ಅಲ್ಲಿಯೇ ಇರುವುದು ಉತ್ತಮ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಕೋವಿಡ್-19 ಹಿನ್ನೆಲೆಯಲ್ಲಿ ಭಾರತಕ್ಕೆ ಬರಲು ಇಚ್ಚಿಸುವ ವಿದೇಶಗಳಲ್ಲಿರುವ ಭಾರತೀಯ ನಾಗರಿಕರಲ್ಲಿ ಕೆಲವರನ್ನು ಆಯ್ಕೆ ಮಾಡಿ ಸ್ವದೇಶಕ್ಕೆ ಕರೆತರಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರದ ಉತ್ತರಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನಿನ್ನೆ ಈ ಆದೇಶ ನೀಡಿದೆ. ಭಾರತಕ್ಕೆ ಬರಲು ಇಚ್ಛಿಸುವ ವಿದೇಶಗಳಲ್ಲಿನ ಭಾರತೀಯರು ಸದ್ಯಕ್ಕೆ ಅಲ್ಲಿಯೇ ಇರಿ ಎಂದು ಹೇಳಿದೆ.

ನಿನ್ನೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್ ಎ ಬೊಬ್ಡೆ ವಿಡಿಯೊ ಕಾನ್ಫರೆನ್ಸ್ ಮೂಲಕ ನಿನ್ನೆ ವಿಚಾರಣೆ ನಡೆಸಿದ್ದರು. ಅದರಲ್ಲಿ ಇಂಗ್ಲೆಂಡ್ ಮತ್ತು ಗಲ್ಫ್ ರಾಷ್ಟ್ರಗಳಿಂದ ಭಾರತೀಯರನ್ನು ಸ್ಥಳಾಂತರ ಮಾಡಲು ಭಾರತ ಸರ್ಕಾರ ವ್ಯವಸ್ಥೆ ಮಾಡಬೇಕೆಂದು ಕೋರಿ ಅರ್ಜಿ ಸಲ್ಲಿಸಿದ್ದಕ್ಕೆ ಸಂಬಂಧಪಟ್ಟಂತೆ ಆದೇಶ ನೀಡುವಾಗ ಹೀಗೆ ಹೇಳಿದರು.

ವಿದೇಶಗಳಲ್ಲಿರುವ ಭಾರತೀಯರು ಸದ್ಯಕ್ಕೆ ಎಲ್ಲಿದ್ದಾರೊ ಅಲ್ಲಿಯೇ ಇರುವುದು ಉತ್ತಮ, ಯೂನಿಯನ್ ಆಫ್ ಇಂಡಿಯಾ ಸಲ್ಲಿಸಿರುವ ಅಫಿಡವಿಟ್ಟನ್ನು ನೋಡಿದ್ದೀರಾ, ಈಗಿನ ಪರಿಸ್ಥಿತಿಯಲ್ಲಿ ಭಾರತಕ್ಕೆ ಬರುವುದಕ್ಕಿಂತ ಅಲ್ಲಿಯೇ ಇರುವುದು ಸುರಕ್ಷಿತ ಎಂದು ವಿದೇಶಗಳಲ್ಲಿರುವ ಭಾರತೀಯರ ಪರವಾಗಿ ವಾದ ಮಂಡಿಸಿದ ವಕೀಲರಿಗೆ ಹೇಳಿದರು.

ಇಂಗ್ಲೆಂಡಿನಲ್ಲಿ ಅನೇಕ ಭಾರತೀಯ ವಿದ್ಯಾರ್ಥಿಗಳು ಸಿಕ್ಕಿಹಾಕಿಕೊಂಡಿದ್ದಾರೆ. ಅವರನ್ನು ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ವ್ಯವಸ್ಥೆ ಮಾಡಬೇಕು ಎಂದು ಅಲ್ಲಿನ ಭಾರತೀಯರ ಪರವಾಗಿ ವಾದ ಮಂಡಿಸಿದ ವಕೀಲರಿಗೆ, ಮುಖ್ಯ ನ್ಯಾಯಮೂರ್ತಿಗಳು ಹೀಗೆ ಹೇಳಿದರು. ಅವರು ಈಗ ಏಕೆ ಭಾರತಕ್ಕೆ ಬರಬೇಕು, ಲಂಡನ್ ನಲ್ಲಿರುವ ಭಾರತೀಯರಿಗೆ ಸಹಾಯ ಮಾಡಲು ಅಲ್ಲಿರುವ ಭಾರತೀಯ ಹೈ ಕಮಿಷನ್ ಅಧಿಕಾರಿಗಳಿಗೆ ಕೇಂದ್ರ ಸರ್ಕಾರ ನಿರ್ದೇಶನ ನೀಡಿದೆ. ಸಂಬಂಧಪಟ್ಟ ಕ್ರಮ ಕೈಗೊಂಡಿದೆ ಎಂದರು.

SCROLL FOR NEXT