ದೇಶ

ಬಾಂದ್ರಾ ನಿಲ್ದಾಣದಲ್ಲಿ ವಲಸೆ ಕಾರ್ಮಿಕರ ಜಮಾವಣೆ ಹಿಂದೆ ಬಿಜೆಪಿ ಕೈವಾಡ: ಶಿವಸೇನಾ

Lingaraj Badiger

ಮುಂಬೈ: ದೇಶಾದ್ಯಂತ ಲಾಕ್‌ಡೌನ್ ವಿಸ್ತರಿಸಿದ ಕೆಲವೇ ಗಂಟೆಗಳಲ್ಲಿ ಮುಂಬೈನ ಬಾಂದ್ರಾ ರೈಲು ನಿಲ್ದಾಣದಲ್ಲಿ ಸಾವಿರಾರು ವಲಸೆ ಕಾರ್ಮಿಕರ ಜಮಾವಣೆ ಹಿಂದೆ ಪ್ರತಿಪಕ್ಷ ಬಿಜೆಪಿಯ ಕೈವಾಡ ಇದೆ ಎಂದು ಆಡಳಿತರೂಢ ಶಿವಸೇನಾ ಆರೋಪಿಸಿದೆ.

ಏಪ್ರಿಲ್ 14ರಂದು ಪ್ರಧಾನಿ ನರೇಂದ್ರ ಮೋದಿ ಅವರು ಲಾಕ್ ಡೌನ್ ಅನ್ನು ಮೇ 3ರ ವರೆಗೆ ವಿಸ್ತರಿಸಿದ ನಂತರ ಸಾವಿರಾರು ವಲಸೆ ಕಾರ್ಮಿಕರು ದಿಢೀರ್ ಬಾಂದ್ರಾ ರೈಲ್ವೆ ನಿಲ್ದಾಣಕ್ಕೆ ಆಗಮಿಸಿ, ತಾವು ವಾಪಸ್ ಊರಿಗೆ ಹೋಗಬೇಕು ಎಂದು ಪಟ್ಟು ಹಿಡಿದು ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಆದರೆ ಪೊಲೀಸರು ಲಾಠಿ ಪ್ರಯೋಗಿಸಿ ಕಾರ್ಮಿಕರನ್ನು ಚದುರಿಸಿದ್ದರು.

ಈ ಘಟನೆಯನ್ನು ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಉಲ್ಲೇಖಿಸಿದ್ದು, ಕಾರ್ಮಿಕರ ಜಮಾವಣೆ ಹಿಂದಿನ ಸಂಚನ್ನು ಮಹಾರಾಷ್ಟ್ರ ಸರ್ಕಾರ ಶೀಘ್ರದಲ್ಲೇ ಬಹಿರಂಗಪಡಿಸಲಿದೆ ಮತ್ತು ಉದ್ಧವ್ ಠಾಕ್ರೆ ನೇತೃತ್ವದ ಸರ್ಕಾರ ಬೀಳಿಸಲು ಬಿಜೆಪಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ.

ನಗರದಿಂದ ಹೊರ ಹೋಗುವ ರೈಲುಗಳು ಉಪನಗರ ಬಾಂದ್ರಾದಿಂದ ಮಾತ್ರವಲ್ಲ, ಲೋಕಮಾನ್ಯ ತಿಲಕ್ ಟರ್ಮಿನಸ್, ಮುಂಬೈ ಸೆಂಟ್ರಲ್ ಮತ್ತು ಮಹಾನಗರದ ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ನಿಂದಲೂ ಹೊರಡುತ್ತವೆ. ಆದರೆ, ಜನಸಮೂಹವು ಬಾಂದ್ರಾದಲ್ಲಿ ಮಾತ್ರ ಸೇರಿದೆ. ಗುಜರಾತ್‌ನ ಸೂರತ್‌ನಲ್ಲಿ ಇದೇ ರೀತಿಯ ಪರಿಸ್ಥಿತಿಯನ್ನು ಟೆಲಿವಿಷನ್ ಸುದ್ದಿ ವಾಹಿನಿಗಳು ಸಂಪೂರ್ಣವಾಗಿ ನಿರ್ಲಕ್ಷಿಸಿವೆ ಎಂದು ಅದು ಹೇಳಿದೆ.

"ನೀವು ಇದನ್ನು ಏನು ಅಂತ ಕರೆಯುತ್ತೀರಿ? ಇದು ದೊಡ್ಡ ಪಿತೂರಿಯಾಗಿದ್ದು, ಅದನ್ನು ನಾವು ಬಹಿರಂಗಪಡಿಸುತ್ತೇವೆ. ಕೊರೋನಾ ವೈರಸ್ ಬಿಕ್ಕಟ್ಟಿನ್ನು ರಾಜ್ಯ ಸರ್ಕಾರದ ವಿರುದ್ಧ ಬಳಸಿಕೊಳ್ಳಲಾಗುತ್ತಿದೆ. ಪ್ರತಿಪಕ್ಷಗಳು ಈ ಮಟ್ಟಕ್ಕೆ ಇಳಿದಿರುವುದಕ್ಕೆ ನಮಗೆ ಬೇಸರವಿದೆ" ಮರಾಠಿ ದಿನಪತ್ರಿಕೆ ಹೇಳಿದೆ.

SCROLL FOR NEXT