ದೇಶ

ಲಾಕ್ ಡೌನ್: ಉತ್ತರ ಪ್ರದೇಶದಲ್ಲಿ ಪಡಿತರ ವಿತರಕನಿಂದ ಮಹಿಳೆ ಮೇಲೆ ಅತ್ಯಾಚಾರ

Lingaraj Badiger

ಶಾಮ್ಲಿ: ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸಲಾಗಿದೆ. ಇದರ ನಡುವೆಯೂ ಪಡಿತರ ವಿತರಿಸುವ ವ್ಯಕ್ತಿಯೊಬ್ಬ 23 ವರ್ಷದ ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಉತ್ತರ ಪ್ರದೇಶದ ಶಾಮ್ಲಿಯಲ್ಲಿ ನಡೆದಿದೆ.

ವರದಿಗಳ ಪ್ರಕಾರ, ಮಹಿಳೆ ಸರ್ಕಾರ ತನಗೆ ನೀಡುವ ಪಡಿತರ ನೀಡುವಂತೆ ಕೇಳಿದ್ದಾರೆ. ಆದರೆ ರೇಷನ್ ಅಂಗಡಿಯ ಮಾಲೀಕ ಪಡಿತರ ನೀಡಲು ನಿರಾಕರಿಸಿದ್ದಾರೆ. ಲಾಕ್ ಡೌನ್ ನಿಂದಾಗಿ ಮಹಿಳೆ ಪತಿ ಪಂಜಾಬ್ ನಲ್ಲಿ ಸಿಲುಕಿದ್ದಾರೆ. ಮಹಿಳೆ ಮನೆಯಲ್ಲಿ ಒಬ್ಬಳೆ ಇರುವುದರಿಂದ ಪಡಿತರ ನೀಡುವ ನೆಪದಲ್ಲಿ ಮನೆ ಬಂದ ರೇಷನ್ ಅಂಗಡಿ ಮಾಲೀಕ, ಮಹಿಳೆಗೆ ಪಡಿತರ ನೀಡುವ ಬದಲು, ಆಕೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಮಂಗಳವಾರ ಸಂಜೆ ನಮ್ಮ ಮನೆಗೆ ಬಂದಿದ್ದ ರೇಷನ್ ಅಂಗಡಿ ಮಾಲೀಕ ವಿನೋದ್, ತನಗೆ ಪಡಿತರ ನೀಡುವ ಬದಲು ತನ್ನ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಮಹಿಳೆ ಆರೋಪಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ವಿನೋದ್ ವಿರುದ್ಧ ಕೇಸ್ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಶಾಮ್ಲಿ ಪೊಲೀಸ್ ವರಿಷ್ಠಾಧಿಕಾರಿ ವಿನೀತ್ ಜೈಸ್ವಾಲ್ ಅವರು ಹೇಳಿದ್ದಾರೆ.

SCROLL FOR NEXT