ದೇಶ

ಸಮೋಸಾ, ಗುಟ್ಕಾ, ಪಾನ್‌, ರಸಗುಲ್ಲ, ಕೋವಿಡ್‌–19 ಸಹಾಯವಾಣಿಗೆ ಕರೆ; ಯೋಗಿ ಸರ್ಕಾರಕ್ಕೆ ಲಾಕ್ ಡೌನ್ ತಲೆನೋವು!

Srinivasamurthy VN

ಲಖನೌ: ಕೊರೋನಾ ವೈರಸ್ ನಿಂದಾಗಿ ತತ್ತರಿಸಿರುವ ಉತ್ತರ ಪ್ರದೇಶ ಸರ್ಕಾರಕ್ಕೆ ಇದೀಗ ಹೊಸ ತಲೆನೋವು ಶುರುವಾಗಿದ್ದು, ಅಗತ್ಯ ವಸ್ತುಗಳು ಮತ್ತು ತುರ್ತು ಸೇವೆಗಳಿಗಾಗಿ ತೆರೆಯಲಾಗಿರುವ ಸಹಾಯವಾಣಿಗೆ ಜನರು ಸಮೋಸಾ, ಗುಟ್ಕಾ, ಪಾನ್‌ಬೀಡಾ, ರಸಗುಲ್ಲ ಕೇಳಿಕೊಂಡು  ಕರೆ ಮಾಡುತ್ತಿದ್ದಾರೆ.

ಲಾಕ್ ಡೌನ್ ಮತ್ತು ಸೀಲ್ ಡೌನ್ ನಿಂದಾಗಿ ದಿಗ್ಭಂಧನಕ್ಕೀಡಾಗಿರುವ ಉತ್ತರ ಪ್ರದೇಶ ಜನತೆ ಇದೀಗ ಉತ್ತರ ಪ್ರದೇಶದ ಯೋಗಿ ಆದಿತ್ಯಾನಾಥ್ ಸರ್ಕಾರಕ್ಕೆ ಹೊಸ ತಲೆನೋವು ಸೃಷ್ಟಿ ಮಾಡುತ್ತಿದ್ದಾರೆ. ಲಾಕ್‌ಡೌನ್‌ ಆಗಿರುವುದರಿಂದ ಜನರಿಗೆ ಅಗತ್ಯ ವಸ್ತುಗಳು  ಹಾಗೂ ತುರ್ತು  ಔಷದಿ ಪೂರೈಕೆ ಮಾಡಲು ಸರ್ಕಾರ ನಾಗರಿಕರಿಗೆ ಸಹಾಯವಾಣಿ ತೆರೆದಿದೆ. ಈಗಾಗಲೇ ಲಕ್ಷಾಂತರ ಜನರು ಕರೆ ಮಾಡಿ ನೆರವು ಪಡೆದುಕೊಂಡಿದ್ದಾರೆ.

ಆದರೆ ಕೆಲವರು ಸರ್ಕಾರದ ಕೋವಿಡ್‌–19 ಸಹಾಯವಾಣಿಗೆ ಕರೆ ಮಾಡಿ ಪಾನ್‌ಬೀಡಾ, ಗುಟ್ಕಾ, ಬಿಸಿಬಿಸಿ ಸಮೋಸಾ, ಪಿಜ್ಜಾ, ರಸಗುಲ್ಲ, ಐಸ್‌ಕ್ರೀಮ್‌, ಎಲೆ ಅಡಿಕೆ ಬೇಕೆಂದು ಕೇಳಿ ಮನವಿ ಮಾಡುತ್ತಿದ್ದಾರೆ. ಜನರ ಇಂತಹ ಕರೆಗಳಿಗೆ ಪೊಲೀಸರು ಬೇಸ್ತು ಬಿದ್ದಿದ್ದು, ಈ ಪೈಕಿ ಕೆಲ  ಕರೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಉತ್ತರ ಪ್ರದೇಶ ಪೊಲೀಸರು ಕರೆ ಮಾಡಿದವರ ವಯಸ್ಸನ್ನು ಕೇಳಿ, ಸಕ್ಕರೆ ಅಂಶ ಕಡಿಮೆ ಇರುವ ಹಿರಿಯ ನಾಗರಿಕರಿಗೆ ವೈದ್ಯರ ಸಲಹೆಯಂತೆ ಸಿಹಿ ತಿಂಡಿಗಳನ್ನು ಪೂರೈಕೆ ಮಾಡಿದ್ದಾರೆ. 

ಉತ್ತರ ಪ್ರದೇಶದಲ್ಲಿ ಎರಡು ಸಹಾಯವಾಣಿಗಳು ಕೆಲಸ ಮಾಡುತ್ತಿವೆ. ಒಂದನ್ನು ಸರ್ಕಾರ ನಿರ್ವಹಣೆ ಮಾಡುತ್ತಿದ್ದರೆ, ಮತ್ತೊಂದನ್ನು ಪೊಲೀಸರು ನಿಭಾಯಿಸುತ್ತಿದ್ದಾರೆ. ಸಾವಿರಕ್ಕೂ ಹೆಚ್ಚು ಪೊಲೀಸರು ಇಲಾಖೆಯ ಸಹಾಯವಾಣಿಯನ್ನು ನಿರ್ವಹಣೆ ಮಾಡುತ್ತಿದ್ದಾರೆ. ನಾಗರಿಕರು ತಮ್ಮ  ಇಷ್ಟದ ಪದಾರ್ಥಗಳು ಹಾಗೂ ಪಾನ್‌ಬೀಡಾ, ಗುಟ್ಕಾ ಮತ್ತು ಎಲೆ ಅಡಿಕೆಯಂತಹ ವ್ಯಸನದ ವಸ್ತುಗಳನ್ನು ಸಹಾಯವಾಣಿ ಮೂಲಕ ಕೋರುತ್ತಿರುವುದು ಪೊಲೀಸರಿಗೆ ತಲೆ ನೋವಾಗಿದೆ ಎಂದು ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಮುಖ್ಯಮಂತ್ರಿಗಳ ಸಹಾಯವಾಣಿಗೆ ಈ ವರೆಗೂ 1076 ಕರೆಗಳು ಬಂದಿದ್ದು, ಈ ಪೈಕಿ ಬಹುತೇಕ ಕರೆಗಳು ತುರ್ತುಅಗತ್ಯಗಳ ನೆರವಿಗಾಗಿ ಕೋರಿ ಮಾಡಿದ ಕರೆಗಳಾಗಿವೆ. ಇದಕ್ಕೆ ಸ್ಪಂದಿಸಿರುವ ಪೊಲೀಸರು ಪೊಲೀಸ್ ರೆಸ್ಪಾನ್ಸ್ ವಾಹನಗಳ (ಪಿಆರ್ ವಿ) ಮೂಲಕ ನೆರವು ಕೋರಿದವರಿಗೆ  ಅಗತ್ಯ ವಸ್ತುಗಳ ಪೂರೈಕೆ ಮಾಡಿದ್ದಾರೆ. ಉತ್ತರ ಪ್ರದೇಶದಲ್ಲಿ ಇಂತಹ ಸುಮಾರು 35 ಸಾವಿರ ಪಿಆರ್ ವಿ ವಾಹನಗಳು ಕರ್ತವ್ಯ ನಿರತವಾಗಿದೆ. ಸುಮಾರು 1100 ಪೊಲೀಸರು ಈ ಕಾರ್ಯಕ್ಕಾಗಿ ನಿಯೋಜನೆಗೊಂಡಿದ್ದಾರೆ. 

ಅಂತೆಯೇ ಅನಗತ್ಯವಾಗಿ ಕರೆ ಮಾಡಿದ್ದ ಸಾಕಷ್ಟು ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ವಶಕ್ಕೆ ಪಡೆದಿದ್ದಾರೆ. 

SCROLL FOR NEXT