ದೇಶ

ಲಾಕ್ ಡೌನ್: ಕಾರ್ಮಿಕರಿಗೆ ರಾಜ್ಯದೊಳಗೆ ಸಂಚರಿಸಲು ಷರತ್ತುಬದ್ಧ ಅನುಮತಿ- ಕೇಂದ್ರ ಗೃಹ ಸಚಿವಾಲಯ 

Nagaraja AB

ನವದೆಹಲಿ: ಲಾಕ್‌ಡೌನ್‌ನಿಂದಾಗಿ ದೇಶದ ವಿವಿಧ ಭಾಗಗಳಲ್ಲಿ ಸಿಲುಕಿಕೊಂಡಿರುವ  ಕಾರ್ಮಿಕರಿಗೆ, ಕೆಲವು ಷರತ್ತುಗಳೊಂದಿಗೆ ರಾಜ್ಯದೊಳಗೆ ಆಯಾ ಕೆಲಸದ ಸ್ಥಳಗಳಿಗೆ ಹೋಗಲು ಅವಕಾಶ ನೀಡಲಾಗುವುದು ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ

ಆದಾಗ್ಯೂ, ಮೇ ರವರೆಗೂ ವಿಸ್ತರಣೆಯಾಗಿರುವ ಲಾಕ್ ಡೌನ್ ವೇಳೆಯಲ್ಲಿ ಅಂತರ್ ರಾಜ್ಯಗಳ ನಡುವೆ ಸಂಚರಿಸಲು ಕಾರ್ಮಿಕರಿಗೆ ಅವಕಾಶ ನೀಡಿಲ್ಲ ಎಂದು ಗೃಹ ಕಾರ್ಯದರ್ಶಿ ಅಜಯ್ ಬಲ್ಲಾಳ್ ಸ್ಪಷ್ಟಪಡಿಸಿದ್ದಾರೆ. 

ಕೊರೋನಾವೈರಸ್ ಹರಡುವಿಕೆ ಕಾರಣದಿಂದ ಕೈಗಾರಿಕೆಗಳು, ಕೃಷಿ, ನಿರ್ಮಾಣ ಮತ್ತಿತರ ವಲಯಗಳ ಕೆಲಸಗಾರರು ತಾವು ಮಾಡುತ್ತಿದ್ದ ಕೆಲಸದ ಸ್ಥಳದಿಂದ ಹೊರಹೋಗಿದ್ದು, ತಮ್ಮ ಮನೆಗಳು ಅಥವಾ ರಾಜ್ಯ, ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ತೆರೆದಿರುವ ಪರಿಹಾರ ಶಿಬಿರಗಳಲ್ಲಿ ಇದ್ದಾರೆ ಎಂದು ಬಲ್ಲಾಳ್ ಆದೇಶದಲ್ಲಿ ತಿಳಿಸಿದ್ದಾರೆ. 

ಏಪ್ರಿಲ್ 20ರ ನಂತರ ಜಾರಿಗೆ ಬರುವಂತೆ ಹೊರಡಿಸಲಾಗಿರುವ ಪರಿಷ್ಕೃತ ಮಾರ್ಗಸೂಚಿಯಂತೆ ಇಂತಹ ಕೆಲಸಗಾರರು ಕೈಗಾರಿಕೆ, ಉತ್ಪಾದನೆ, ನಿರ್ಮಾಣ, ಕೃಷಿ  , ಮನ್ರೇಗಾದಂತಹ ಕೆಲಸಗಳಲ್ಲಿ ತೊಡಗಿಸಿಕೊಳ್ಳಬಹುದಾಗಿದೆ ಎಂದು ಹೇಳಲಾಗಿದೆ. 

ಪರಿಷ್ಕೃತ ಮಾರ್ಗಸೂಚಿಯಂತೆ ರಾಜ್ಯ ಅಥವಾ ಕೇಂದ್ರಾಡಳಿತ ಪ್ರದೇಶಗೊಳಗೆ ಸಂಚರಿಸಲು ಮಾತ್ರ ಅವಕಾಶ ನೀಡಲಾಗುತ್ತಿದೆ. ಪ್ರಸ್ತುತ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿನ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿರುವ ವಲಸೆ ಕಾರ್ಮಿಕರು ಸಂಬಂಧಪಟ್ಟ ಸ್ಥಳೀಯ ಪ್ರಾಧಿಕಾರದಲ್ಲಿ ನೋಂದಾಯಿಸಿಕೊಳ್ಳಬೇಕಾಗುತ್ತದೆ. 

ಬಸ್ ಗಳಲ್ಲಿ ಸಂಚರಿಸುವ ವೇಳೆಯಲ್ಲಿ ಸಾಮಾಜಿಕ ಅಂತರ ನಿಯಮವನ್ನು ಕಾಯ್ದುಕೊಳ್ಳಬೇಕು, ಆರೋಗ್ಯ ಇಲಾಖೆ ಮಾರ್ಗಸೂಚಿಯಂತೆ ಬಸ್ ಗಳಿಗೆ ಸ್ಯಾನಿಟೈಸರ್ ಸಿಂಪಡಿಸಬೇಕು ಎಂದು ತಿಳಿಸಲಾಗಿದೆ. 

ವಲಸೆ ಕಾರ್ಮಿಕರಿಗೆ ತಮ್ಮ ಸ್ಥಳಗಳಿಗೆ ತೆರಳುವ ವೇಳೆಯಲ್ಲಿ ಸ್ಥಳೀಯ ಆಡಳಿತದಿಂದ ಊಟ, ನೀರು ಮತ್ತಿತರ ಅವಶ್ಯಕ ಸೌಕರ್ಯಗಳನ್ನು ಒದಗಿಸಬೇಕು ಎಂದು ಸೂಚಿಸಲಾಗಿದೆ. 

SCROLL FOR NEXT