ದೇಶ

ಗುಜರಾತಿನಲ್ಲಿ ಕೊರೋನಾ ಅಟ್ಟಹಾಸ: 24 ತಾಸಿನಲ್ಲಿ 108 ಪ್ರಕರಣ, ಸಾವಿನ ಸಂಖ್ಯೆ 67ಕ್ಕೆ ಏರಿಕೆ 

Raghavendra Adiga

ಅಹಮದಾಬಾದ್: ಸೋಮವಾರ ಗುಜರಾತಿನಲ್ಲಿ ಮತ್ತೆ ನಾಲ್ಕು ಮಂದಿ ಮಾರಕ ಕೊರೋನಾಗೆ ಬಲಿಯಾಗಿದ್ದು ರಾಜ್ಯದಲ್ಲಿ ಇದುವರೆಗೆ 67 ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ನಾಲ್ಕರಲ್ಲಿ ಅಹಮದಾಬಾದ್ ಹಾಗೂ ಸೂರತ್ ನಲ್ಲಿ ತಲಾ ಎರಡು ಸಾವಿನ ವರದಿಯಾಗಿದೆ ಎಂದು ಆರೋಗ್ಯ ಇಲಾಖೆ  ಪ್ರಧಾನ ಕಾರ್ಯದರ್ಶಿಜಯಂತಿ ರವಿ ತಿಳಿಸಿದ್ದಾರೆ. ಈ ರೋಗಿಗಳಲ್ಲಿ ಮೂವರು ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಮೂತ್ರಪಿಂಡ ಕಾಯಿಲೆಯಂತಹ ಆರೋಗ್ಯಸಮಸ್ಯೆ ಹೊಂದಿದ್ದರು.

ಅಹಮದಾಬಾದ್‌ ನಲ್ಲಿ ಮೃತಪಟ್ಟವರು  59 ಮತ್ತು 54 ವರ್ಷದ ಪುರುಷರು. ಸೂರತ್ ನಲ್ಲಿ  70 ವರ್ಷದ ವ್ಯಕ್ತಿ ಮತ್ತು 80 ವರ್ಷದ ಮಹಿಳೆ ಕೊರೋನಾಗೆ ಬಲಿಯಾಗಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ."ಈ ಕೋವಿಡ್ 19 ರೋಗಿಗಳಲ್ಲಿ ಹೆಚ್ಚಿನವರು ಕೆಲವು ಆರೋಗ್ಯ ಸಂಬಂಧಿ ಗಂಭೀರ ಸಮಸ್ಯೆ ಹೊಂದಿದ್ದಾರೆ. ಹಾಗೆ ಯಾವುದೇ ಸಮಸ್ಯೆಗಳಿಲ್ಲದವರು ಕೇವಲ ಏಳು ಜನ ಕೊರೋನಾದಿಂದ ಸಾವನ್ನಪ್ಪಿದ್ದಾರೆ"

ಕೊರೋನಾದಿಂದ ಸಾವನ್ನಪ್ಪಿದವರಲ್ಲಿ ಶೇ. 50 ರಷ್ಟು ಜನ ಮಲ್ಟಿಪಲ್ ಕೊಮೊರ್ಬಿಡಿಟಿ ಹೊಂದಿರುವವರು  ಎಂದು ಅಧಿಕಾರಿ ಹೇಳಿದರು.

ಸೋಮವಾರ ರಾಜ್ಯದಲ್ಲಿ ಒಟ್ಟಾರೆ 108 ಮಂದಿಗೆ ಕೊರೋನಾ ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಒಟ್ಟಾರೆ ಕೋವಿಡ್ ಪೀಡಿತರ ಸಂಖ್ಯೆ 1,851 ಕ್ಕೆ ಏರಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಹೊಸ ರೋಗಿಗಳ ಪೈಕಿ 91 ಮಂದಿ ಅಹಮದಾಬಾದ್‌ ನವರಾಗಿದ್ದಾರೆ.  ಜಿಲ್ಲೆಯಲ್ಲಿ ಒಟ್ಟು 1,192 ಪ್ರಕರಣಗಳು ದಾಖಲಾಗಿವೆ.

ಅಲ್ಲದೆ, ಅರಾವಳಿ ಜಿಲ್ಲೆಯಿಂದ ಆರು ಹೊಸ ಪ್ರಕರಣಗಳು, ಕಚ್, ಮಹಿಸಾಗರ್, ಪಂಚಮಹಲ್, ರಾಜ್‌ಕೋಟ್ ಮತ್ತು ಸೂರತ್‌ನಿಂದ ತಲಾ ಎರಡು ಮತ್ತು ವಡೋದರಾ ಮತ್ತು ಮೆಹ್ಸಾನಾದಿಂದ ತಲಾ ಒಂದು ಪ್ರಕರಣಗಳು ವರದಿಯಾಗಿವೆ. ಈವರೆಗೆ 106 ರೋಗಿಗಳನ್ನು ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ. 1,676 ಸಕ್ರಿಯ ಪ್ರಕರಣಗಳಲ್ಲಿ 14 ರೋಗಿಗಳು ಗಂಭೀರ ಸ್ಥಿತಿಯಲ್ಲಿದ್ದರೆ 1,662 ಮಂದಿ ಸ್ಥಿರರಾಗಿದ್ದಾರೆ ಎಂದು ಅವರು ಹೇಳಿದರು

SCROLL FOR NEXT