ದೇಶ

ಕೊರೋನಾ ಸಂಪೂರ್ಣ ನಿಯಂತ್ರಣಕ್ಕೆ ಬಂದ ನಂತರವೇ ವಿಮಾನ ಸೇವೆ ಆರಂಭ: ಕೇಂದ್ರ

Lingaraj Badiger

ನವದೆಹಲಿ: ದೇಶದಲ್ಲಿ ಕೊರೋನಾ ವೈರಸ್ ಸಂಪೂರ್ಣ ನಿಯಂತ್ರಣಕ್ಕೆ ಬಂದ ನಂತರವೇ ವಿಮಾನ ಹಾರಾಟಕ್ಕೆ ವಿಧಿಸಲಾಗಿರುವ ನಿರ್ಬಂಧವನ್ನು ತೆರವುಗೊಳಿಸಲಾಗುವುದು ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಸೋಮವಾರ ಸ್ಪಷ್ಟಪಡಿಸಿದ್ದಾರೆ.

ಈ ಸಂಬಂಧ ಸರಣಿ ಟ್ವೀಟ್ ಮಾಡಿರುವ ಪುರಿ ಅವರು, ಕೊವಿಡ್-19 ವಿರುದ್ಧದ ಹೋರಾಟದ ಭಾಗವಾಗಿ ದೇಶದಲ್ಲಿ ವಿಮಾನ ಸೇವೆ ಬಂದ್ ಮಾಡಲಾಗಿದೆ. ವೈರಸ್ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ ಎಂಬ ವಿಶ್ವಾಸ ಮೂಡಿದ ನಂತರ ಮತ್ತು ಕೊರೋನಾ ವೈರಸ್ ನಿಂದ ದೇಶಕ್ಕೆ, ಜನತೆಗೆ ಅಪಾಯ ಇಲ್ಲ ಎಂಬುದು ಖಚಿತವಾದ ನಂತರವೇ ವಿಮಾನ ಸೇವೆಗೆ ಅವಕಾಶ ನೀಡಲಾಗುವುದು ಎಂದು ಹೇಳಿದ್ದಾರೆ.

ಲಾಕ್ ಡೌನ್ ಅಂತ್ಯಗೊಂಡ ನಂತರವೇ ವಿಮಾನ ಸೇವೆ ಮೇಲಿನ ನಿರ್ಬಂಧ ತೆರವುಗೊಳಿಸುವ ಬಗ್ಗೆ ಪರಿಗಣಿಸಲಾಗುವುದು ಎಂದು ನಾನು ಈ ಮುಂಚೆಯೇ ಹೇಳಿದ್ದೇನೆ ಎಂದಿದ್ದಾರೆ.

ದೇಶೀಯ ಮತ್ತು ಅಂತರರಾಷ್ಟ್ರೀಯ ವಿಮಾನ ಸೇವೆ ಆರಂಭಿಸುವ ಕುರಿತು ಇಲ್ಲಿಯವರೆಗೆ ಯಾವುದೇ ನಿರ್ಧಾರವನ್ನು ತೆಗೆದುಕೊಂಡಿಲ್ಲ ಎಂದು ನಾನು ಏಪ್ರಿಲ್ 18 ರಂದೇ ಹೇಳಿದ್ದೆ ಮತ್ತು ಏಪ್ರಿಲ್ 19ರಂದು ಮತ್ತೆ ಅದನ್ನೇ ಪುನರುಚ್ಚರಿಸಿದ್ದೆ. ಅಲ್ಲದೆ ಈ ಸಂಬಂಧ ಸಲಹೆ ಸೂಚನೆಗಳನ್ನು ನೀಡಲಾಗಿದೆ. ಆದರೂ ಕೆಲವು ವಿಮಾನ ಸಂಸ್ಥೆಗಳು ಸರ್ಕಾರದ ಸೂಚನೆಯನ್ನು ಉಲ್ಲಂಘಿಸಿ ಬುಕಿಂಗ್ ಆರಂಭಿಸಿದ್ದವು ಎಂದು ಪುರಿ ಟ್ವೀಟ್ ಮಾಡಿದ್ದಾರೆ. 

SCROLL FOR NEXT