ದೇಶ

ಕೊವಿಡ್-19 ತಪ್ಪು ಫಲಿತಾಂಶ: 2 ದಿನ ರಾಪಿಡ್ ಟೆಸ್ಟ್ ಕಿಟ್ ಬಳಸದಂತೆ ರಾಜ್ಯಗಳಿಗೆ ಐಸಿಎಂಆರ್ ಸೂಚನೆ

Lingaraj Badiger

ನವದೆಹಲಿ: ಕೊವಿಡ್-19 ಟೆಸ್ಟ್ ಬಗ್ಗೆ ಅನುಮಾನ ವ್ಯಕ್ತಪಡಿಸಿ ಹಲವು ದೂರುಗಳು ಬಂದ ಹಿನ್ನೆಲೆಯಲ್ಲೇ ಮುಂದಿನ  ಎರಡು ದಿನಗಳ ಕಾಲ ರಾಪಿಡ್ ಆ್ಯಂಟಿಬಾಡಿ ಟೆಸ್ಟ್ ಕಿಟ್ ಗಳನ್ನು ಬಳಸದಂತೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ಎಲ್ಲಾ ರಾಜ್ಯಗಳಿಗೆ ಮಂಗಳವಾರ ಸೂಚನೆ ನೀಡಿದೆ.

ಫಲಿತಾಂಶದಲ್ಲಿ ವ್ಯತ್ಯಾಸವಾಗುತ್ತಿದೆ ಎಂಬ ದೂರು ಬಂದ ಹಿನ್ನೆಲೆಯಲ್ಲಿ ರಾಪಿಡ್ ಟೆಸ್ಟ್ ಕಿಟ್ ಗಳನ್ನು ಬಳಸದಂತೆ ಐಸಿಎಂಆರ್ ರಾಜ್ಯಗಳಿಗೆ ನಿರ್ದೇಶನ ನೀಡಿದೆ. ಅಲ್ಲದೆ ಎರಡು ದಿನದ ಬಳಿಕ ಈ ಕುರಿತು ಸಲಹೆ ನೀಡುವುದಾಗಿ ತಿಳಿಸಿದೆ.

ಇತ್ತೀಚಿಗಷ್ಟೇ ಕೇಂದ್ರ ಸರ್ಕಾರ ಹಾಟ್ ಸ್ಪಾಟ್ ಪ್ರದೇಶಗಳಲ್ಲಿ ರಾಪಿಡ್ ಟೆಸ್ಟ್ ನಡೆಸುವಂತೆ ದೇಶಾದ್ಯಂತ ಐದು ಲಕ್ಷ ರಾಪಿಡ್ ಟೆಸ್ಟ್ ಕಿಟ್ಸ್ ಗಳನ್ನು ವಿತರಿಸಿತ್ತು. ಆದರೆ ರಾಜಸ್ಥಾನ ಸೇರಿದಂತೆ ಕೆಲವು ರಾಜ್ಯಗಳಲ್ಲಿ ಚೀನಾದಿಂದ ಬಂದಿರುವ ರಾಪಿಡ್ ಟೆಸ್ಟ್ ಕಿಟ್ ಗಳ ಗುಣಮಟ್ಟದ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜಸ್ಥಾನ ಸರ್ಕಾರ ಐಸಿಎಂಆರ್ ಗೆ ದೂರು ನೀಡಿತ್ತು.

ರಾಜಸ್ಥಾನ ಸರ್ಕಾರ ರಾಪಿಡ್ ಟೆಸ್ಟ್ ಕಿಸ್ಟ್ ಬಳಕೆ ನಿಲ್ಲಿಸಿದೆ. ಕಾರಣ ರಾಪಿಡ್ ಟೆಸ್ಟ್ ಕಿಟ್ಸ್ ಫಲಿತಾಂಶದ ನಿಖರತೆ ಕೇವಲ ಶೇ.5ರಷ್ಟು ಎಂದು ತಿಳಿಸಿದೆ. ರಾಪಿಡ್ ಟೆಸ್ಟ್ ಕಿಟ್ಸ್ ಬಳಸಿ ಜೈಪುರದ ಸವಾಯಿ ಮಾನ್ ಸಿಂಗ್ ಆಸ್ಪತ್ರೆಯ(ಎಸ್ ಎಂಎಸ್) ವೈದ್ಯರು ಕೊವಿಡ್ -19 ರೋಗಿಗಳನ್ನು ಪರೀಕ್ಷಿಸಿದಾಗ ಶೇ.95ರಷ್ಟು ಪ್ರಕರಣಗಳಲ್ಲಿ ನೆಗೆಟಿವ್ ವರದಿ ನೀಡಿತ್ತು.

ಜೈಪುರದ ಎಸ್ ಎಂಎಸ್ ಆಸ್ಪತ್ರೆಯ ಮೈಕ್ರೊ ಬಯೋಲಜಿ ಮತ್ತು ಮೆಡಿಸಿನ್ ವಿಭಾಗ ಈ ಕಿಟ್ಸ್ ಬಳಸಿ ಕೊವಿಡ್- 19 ಸೋಂಕು ದೃಢಪಟ್ಟಿದ್ದ ನೂರು ರೋಗಿಗಳನ್ನು ಪರೀಕ್ಷೆಗೊಳಪಡಿಸಿದ್ದರು. ಆದರೆ ವೈದ್ಯರಿಗೆ ಫಲಿತಾಂಶ ನೋಡಿ ಆಘಾತ ಆಗಿತ್ತು. ಅದಕ್ಕೆ ಕಾರಣ ಕೇವಲ ಐದು ಮಂದಿಗೆ ಮಾತ್ರ ಕೋವಿಡ್ 19 ಸೋಂಕು ಪಾಸಿಟಿವ್ ಎಂದು ಫಲಿತಾಂಶ ನೀಡಿ, ಉಳಿದ 95 ಜನರಿಗೆ ನೆಗೆಟಿವ್ ಎಂದು ಫಲಿತಾಂಶ ನೀಡಿತ್ತು!

ಹೀಗಾಗಿ ರಾಪಿಡ್ ಟೆಸ್ಟ್ ಕಿಟ್ಸ್ ನೀಡುವ ಫಲಿತಾಂಶ ನೈಜತೆಯಿಂದ ಕೂಡಿಲ್ಲ, ಅದರ ನಿಖರತೆಯೂ ಸಮರ್ಪಕವಾಗಿಲ್ಲ ಎಂದು ರಾಜ್ಯದ ಆರೋಗ್ಯ ಸಚಿವ ರಘು ಶರ್ಮಾ ತಿಳಿಸಿದ್ದಾರೆ. ನಾವು ಈ ಫಲಿತಾಂಶದ ವರದಿಯನ್ನು ಐಸಿಎಂಆರ್ ಗೆ ಕಳುಹಿಸಿಕೊಟ್ಟಿದ್ದೇವೆ. ಆದರೆ ಐಸಿಎಂಆರ್ ಯಾವುದೇ ಸಮಾಧಾನಕರ ಉತ್ತರ ನೀಡಿಲ್ಲ. ಹೀಗಾಗಿ ನಾವು ಎಲ್ಲಾ ಕಿಟ್ಸ್ ಗಳನ್ನು ವಾಪಸ್ ಕಳುಹಿಸುತ್ತೇವೆ ಎಂದು ಹೇಳಿದ್ದಾರೆ.

SCROLL FOR NEXT