ದೇಶ

ಕೆಲಸಗಾರರಲ್ಲಿ ಕೋವಿಡ್-19 ಸೋಂಕು ಪತ್ತೆಯಾದರೆ ಸಿಇಒ ವಿರುದ್ಧ ಕ್ರಮವಿಲ್ಲ- ಕೇಂದ್ರ ಸರ್ಕಾರ  

Nagaraja AB

ನವದೆಹಲಿ: ಕಂಪನಿ ಅಥವಾ ಕಾರ್ಖಾನೆಯ ಕೆಲಸಗಾರರಲ್ಲಿ ಕೋವಿಡ್-19 ಸೋಂಕು ಪತ್ತೆಯಾದರೆ ಆ ಕಂಪನಿಯ ಸಿಇಒ ವಿರುದ್ಧ ಕ್ರಮ ಕೈಗೊಳ್ಳುವುದಿಲ್ಲ, ಅಥವಾ ಕಾರ್ಖಾನೆಯನ್ನು ಮುಚ್ಚುವುದಿಲ್ಲ ಎಂದು ಕೇಂದ್ರ ಸರ್ಕಾರ ಗುರುವಾರ ಸ್ಪಷ್ಪಪಡಿಸಿದೆ.

ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಬಲ್ಲಾ, ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ ಪ್ರಧಾನ ಕಾರ್ಯದರ್ಶಿಗಳಿಗೆ  ಬರೆದಿರುವ ಪತ್ರದಲ್ಲಿ ಈ ವಿಷಯ ತಿಳಿಸಿದ್ದಾರೆ. ಕೆಲ ಮೂಲಸೌಕರ್ಯ ಉತ್ಪಾದನಾ ಕಂಪನಿಗಳು ಮತ್ತು ಮಾಧ್ಯಮಗಳಿಂದ ತಪ್ಪಾದ ಮಾರ್ಗಸೂಚಿ ವ್ಯಾಖ್ಯಾನಗಳ ಆಧಾರದಲ್ಲಿ ಕೆಲ ಆತಂಕಗಳು ಎದ್ದಿವೆ ಎಂದು ತಿಳಿಸಲಾಗಿದೆ. 

ಅಂತಹ ತಪ್ಪಾದ ಮೂರು ಆತಂಕಗಳ ಪಟ್ಟಿಯನ್ನು ಅಜಯ್ ಬಲ್ಲಾ ತಿಳಿಸಿದ್ದಾರೆ. ಮೊದಲನೇಯದಾಗಿ  ಕಾರ್ಖಾನೆಗಳಲ್ಲಿ ಕೆಲಸಗಾರರಲ್ಲಿ ಕೋವಿಡ್-19 ಪಾಸಿಟಿವ್ ಕಂಡುಬಂದರೆ ಸಿಇಒ ವಿರುದ್ಧ ಜೈಲು ಶಿಕ್ಷೆ ಸೇರಿದಂತೆ ರಾಜ್ಯಗಳು ಕಾನೂನು ಕ್ರಮ ಕೈಗೊಳ್ಳಬಹುದು

(ಬಿ) ಇಂತಹ ಪರಿಸ್ಥಿತಿಯಲ್ಲಿ ಕಾರ್ಖಾನೆ ಆವರಣವನ್ನು ಮೂರು ತಿಂಗಳ ಕಾಲ ಬಂದ್ ಮಾಡಲಾಗುವುದು

(ಸಿ) ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಸದಿದ್ದಲ್ಲಿ, ಕಾರ್ಖಾನೆಯನ್ನು ಎರಡು ದಿನಗಳವರೆಗೆ ಮುಚ್ಚಬಹುದು ಮತ್ತು  ಕಾನೂನು ಬದ್ಧಗೊಂಡ ನಂತರ ಮರುಪ್ರಾರಂಭಿಸಲು ಅನುಮತಿಸಬಹುದು

ಪರಿಷ್ಕೃತ ಮಾರ್ಗಸೂಚಿಯಲ್ಲಿ ಇಂತಹ ಯಾವುದೇ ಷರತ್ತು ವಿಧಿಸಿಲ್ಲ, ಇಂತಹ ತಪ್ಪಾದ ಆತಂಕಗಳಿಗೆ ಯಾವುದೇ ಆಧಾರವಿಲ್ಲ ಎಂಬುದನ್ನು ಸ್ಪಷ್ಪಪಡಿಸಿರುವುದಾಗಿ  ಅಜಯ್ ಬಲ್ಲಾ ಪತ್ರದಲ್ಲಿ ತಿಳಿಸಿದ್ದಾರೆ

SCROLL FOR NEXT