ದೇಶ

ಮೇ 3 ನಂತರ ವಲಸಿಗರು ತಮ್ಮ ರಾಜ್ಯಕ್ಕೆ ತೆರಳಲು ಅವಕಾಶ ನೀಡಬೇಕು-ಚಿದಂಬರಂ ಒತ್ತಾಯ

Lingaraj Badiger

ನವದೆಹಲಿ: ಲಾಕ್‍ಡೌನ್‍ ಅವಧಿ ಮುಗಿಯುವ ಮೇ 3ರ ನಂತರ ಆರೋಗ್ಯ ಸುರಕ್ಷತೆಯ ಕಟ್ಟುನಿಟ್ಟಿನ ಷರತ್ತುಗಳೊಂದಿಗೆ ತಮ್ಮ ರಾಜ್ಯಗಳಿಗೆ ತೆರಳಲು ವಲಸಿಗರಿಗೆ ಅವಕಾಶ ನೀಡಬೇಕು ಎಂದು ಕೇಂದ್ರ ಮಾಜಿ ಗೃಹ ಸಚಿವ ಹಾಗೂ ಕಾಂಗ್ರೆಸ್‍ ಮುಖಂಡ ಪಿ ಚಿದಂಬರಂ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಮೇ 3 ನಂತರ ತಮ್ಮ ರಾಜ್ಯಗಳ ಸ್ವಗ್ರಾಮಗಳಿಗೆ ಹಿಂತಿರುಗುವ ಅವಕಾಶ ಸಿಗಲಿದೆ ಎಂಬ ಅತ್ಯುತ್ಸಾಹ ಮತ್ತು ಇಚ್ಛೆ ವಲಸಿಗರಲ್ಲಿ ಮತ್ತು ಅವರ ಕುಟುಂಬಗಳಲ್ಲಿ ಇದೆ ಎಂದು ಸರಣಿ ಟ್ವೀಟ್‍ಗಳಲ್ಲಿ ಚಿದಂಬರಂ ಹೇಳಿದ್ದಾರೆ.

ತಮ್ಮ ಸ್ವಂತ ರಾಜ್ಯಗಳಿಗೆ ಹಿಂತಿರುಗಿ ಅವರ ಕುಟುಂಬಗಳೊಂದಿಗೆ ಸೇರಲು ಮತ್ತು ತಮ್ಮದೇ ಆದ ಭಾಷೆ ಮಾತನಾಡುವ ಜನರಲ್ಲಿ ಇರಬೇಕೆಂಬ ಅದಮ್ಯ ಬಯಕೆಯನ್ನು ಲಾಕ್‌ಡೌನ್ ಹೆಸರಿನಲ್ಲಿ ಹೆಚ್ಚು ಕಾಲ ಹತ್ತಿಕ್ಕಬಾರದು ಎಂದು ಅವರು ಹೇಳಿದ್ದಾರೆ.

ಕೊರೋನಾ ವೈರಸ್ ಹರಡುವಿಕೆ ತಡೆಯಲು ರಾಷ್ಟ್ರವ್ಯಾಪಿ ಜಾರಿಗೊಳಿಸಲಾಗಿರುವ ಲಾಕ್ ಡೌನ್ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು ಮೇ 3 ರವರೆಗೆ ಅವರು ವಿಸ್ತರಿಸಿದ್ದರು.

ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ನಿರ್ಣಯವನ್ನು ಉಲ್ಲೇಖಿಸಿದ ಚಿದಂಬರಂ, ಆರೋಗ್ಯ ಸುರಕ್ಷತೆಯ ಕಟ್ಟುನಿಟ್ಟಿನ ಷರತ್ತುಗಳಡಿ ಮೇ 3 ರ ನಂತರ ವಲಸೆ ಬಂದವರಿಗೆ ತಮ್ಮ ತವರು ರಾಜ್ಯಗಳಿಗೆ ಪ್ರಯಾಣಿಸಲು ಅವಕಾಶ ನೀಡುವ ಮಾನವೀಯ ನೀತಿಯನ್ನು ರೂಪಿಸಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸರ್ಕಾರವನ್ನು ಒತ್ತಾಯಿಸಿದೆ ಎಂದು ಹೇಳಿದ್ದಾರೆ. 

SCROLL FOR NEXT