ದೇಶ

ಕೊವಿಡ್-19: ಡಬಲ್ ಆಗುವ ಪ್ರಮಾಣ 10 ದಿನಕ್ಕೆ ಏರಿಕೆ, 14 ದಿನಗಳಿಂದ 80 ಜಿಲ್ಲೆಯಲ್ಲಿ ಹೊಸ ಪ್ರಕರಣ ಇಲ್ಲ - ಕೇಂದ್ರ 

Lingaraj Badiger

ನವದೆಹಲಿ: ಮಹಾಮಾರಿ ಕೊರೋನಾ ವೈರಸ್ ನಿಯಂತ್ರಿಸುವುದಕ್ಕಾಗಿ ದೇಶಾದ್ಯಂತ ಲಾಕ್‌ ಡೌನ್‌ ಜಾರಿಗೊಳಿಸಲಾಗಿದ್ದು, ಇದರಿಂದ ಕೊರೋನಾ ವೈರಸ್ ಸೋಂಕಿತರ ಏರಿಕೆ ಪ್ರಮಾಣ ಕಡಿಮೆಯಾಗಿದೆ ಎಂದು ಕೇಂದ್ರ ಸರ್ಕಾರ ಶುಕ್ರವಾರ ತಿಳಿಸಿದೆ.

ದೇಶದಲ್ಲಿ ಲಾಕ್ ಡೌನ್ ಜಾರಿಗೊಳಿಸುವ ಮುನ್ನ ಕೇವಲ 3.4 ದಿನದಲ್ಲಿ ಕೊವಿಡ್-19 ಸೋಂಕಿತರ ಸಂಖ್ಯೆಯು ಡಬಲ್ ಆಗುತ್ತಿತ್ತು. ಈಗ ಸೋಂಕಿತರ ಸಂಖ್ಯೆ ದುಪ್ಪಟ್ಟಾಗಲು 10 ದಿನಗಳು ಬೇಕಾಗುತ್ತಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ ಅಗರವಾಲ್ ಅವರು ಹೇಳಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಕೊವಿಡ್-19 ಕುರಿತು ಮಾಹಿತಿ ನೀಡಿದ ಲವ ಅಗರವಾಲ್ ಅವರು, ಕಳೆದ 14 ದಿನಗಳಿಂದ ದೇಶದ 80 ಜಿಲ್ಲೆಗಳಲ್ಲಿ ಯಾವುದೇ ಹೊಸ ಪ್ರಕರಣ ವರದಿಯಾಗಿಲ್ಲ. ಸರಿಯಾದ ಸಮಯಕ್ಕೆ ದೇಶದಲ್ಲಿ ಲಾಕ್ ಡೌನ್  ಜಾರಿಗೊಳಿಸಲಾಗಿದೆ ಮತ್ತು ಇದು ಕೊರೋನಾ ವೈರಸ್ ನಿಯಂತ್ರಿಸುವಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ ಎಂದರು.

ದೇಶಾದ್ಯಂತ ಕರೋನಾ ಸೋಂಕಿತರ ಸಂಖ್ಯೆ 23  ಸಾವಿರಕ್ಕೂ ಹೆಚ್ಚಿದ್ದು, ಒಟ್ಟು ಈವರೆಗೆ 718 ಜನರು ಮೃತಪಟ್ಟಿದ್ದಾರೆ 4748ಕ್ಕೂ ಜನರು ಈವರೆಗೆ  ಸೋಂಕಿನಿಂದ ಪೂರ್ಣ ಗುಣಮುಖರಾಗಿದ್ದಾರೆ ಎಂದು ಅವರು ತಿಳಿಸಿದರು.

ಲಾಕ್ ಡೌನ್ ಜಾರಿಯಾದ ಕಾರಣ ಕರೋನಾ ಸೋಂಕಿತರ ಸಂಖ್ಯೆ ತೀವ್ರಗತಿಯಲ್ಲಿ ಏರಿಕೆಯಾಗಿಲ್ಲ. ಕಳೆದ 24 ಗಂಟೆಯಲ್ಲಿ ದೇಶಾದ್ಯಂತ 1,684 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಇದರೊಂದಿಗೆ ದೇಶದಲ್ಲಿ  ಸೋಂಕಿತರ ಸಂಖ್ಯೆ 23, 077 ಕ್ಕೆ ಏರಿಕೆಯಾಗಿದೆ. ಒಂದು ವೇಳೆ ದೇಶಾದ್ಯಂತ ಲಾಕ್ ಡೌನ್ ಜಾರಿಗೊಳಿಸದಿದ್ದರೆ ಇದುವರೆಗೆ 73 ಸಾವಿರ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿದ್ದವು ಎಂದು ಅಗರವಾಲ್ ಅವರು ಹೇಳಿದ್ದಾರೆ.

ಮಹಾರಾಷ್ಟ್ರದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ನಂತರ  ದೆಹಲಿ,  ಮಧ್ಯಪ್ರದೇಶ,  ರಾಜಸ್ತಾನದಲ್ಲಿ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ ಎಂದರು.

SCROLL FOR NEXT