ದೇಶ

ಕೊರೋನಾ ವೈರಸ್ ನಿಂದ ಗುಣಮುಖರಾದವರು ರಕ್ತ (ಪ್ಲಾಸ್ಮಾ) ದಾನ ಮಾಡಿ: ದೆಹಲಿ ಸಿಎಂ ಕೇಜ್ರಿವಾಲ್ ಮನವಿ

Srinivasamurthy VN

ನವದೆಹಲಿ: ಕೊರೋನಾ ವೈರಸ್ ಸೋಂಕಿನಿಂದ ಚೇತರಿಸಿಕೊಂಡಿರುವ ಎಲ್ಲರೂ ಮುಂದೆ ಬಂದು ರಕ್ತದಾನ ಮಾಡಿ‌, ಆ ಮೂಲಕ ಇತರೆ ಸೋಂಕಿತರನ್ನು ರಕ್ಷಿಸಲು ನೆರವಾಗಬೇಕು ಎಂದು ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಮಾನವಿ ಮಾಡಿದ್ದಾರೆ.

ವಿಡಿಯೊ ಕಾನ್ಫರೆನ್ಸ್‌ ಮೂಲಕ ಮಾಧ್ಯಮಗಳನ್ನು ಉದ್ದೇಶಿ ಮಾತನಾಡಿದ ಕೇಜ್ರಿವಾಲ್, 'ನಾಲ್ವರು ಕೊರೊನಾ ವೈರಸ್‌ (ಕೋವಿಡ್‌–19) ಸೋಂಕಿತರ ಮೇಲೆ ನಡೆಸಲಾದ ಪ್ಲಾಸ್ಮಾ ಥೆರಪಿ ಪ್ರಯೋಗದ ಆರಂಭಿಕ ಫಲಿತಾಂಶಗಳು ಆಶಾದಾಯಕವಾಗಿವೆ. ಅಲ್ಲದೆ, ಪ್ರಯೋಗದ  ಫಲಿತಾಂಶಗಳು ಸೋಂಕಿತರ ಪ್ರಾಣ ಉಳಿಸುವ ಭರವಸೆ ನೀಡಿವೆ' ಎಂದು ಹೇಳಿದರು.

ಅಲ್ಲದೆ 'ಮುಂದಿನ ಎರಡು-ಮೂರು ದಿನಗಳಲ್ಲಿ ಪ್ಲಾಸ್ಮಾ ಚಿಕಿತ್ಸೆಯ ಹೆಚ್ಚಿನ ಪ್ರಯೋಗಗಳನ್ನು ನಡೆಸಲು ಸರ್ಕಾರ ಉದ್ದೇಶಿಸಿದೆ. ಅದರ ನಂತರ, ದೆಹಲಿಯ ಎಲ್ಲಾ ಕೋವಿಡ್‌ 19 ಸೋಂಕಿತರಿಗೆ ಪ್ಲಾಸ್ಮಾ ಚಿಕಿತ್ಸೆ ನೀಡುವ ಕುರಿತು ಕೇಂದ್ರದ ಅನುಮತಿಯನ್ನು ಪಡೆಯಲಿದ್ದೇವೆ. ಎನ್ಎನ್  ಜೆಪಿ ಆಸ್ಪತ್ರೆಯಲ್ಲಿ ಚಿಂತಾಜನಕ ಸ್ಥಿತಿಯಲ್ಲಿರುವ ರೋಗಿಗಳಿಗೆ ಮಾತ್ರ ಪ್ಲಾಸ್ಮಾ ಥೆರಪಿ ನಡೆಸುವಂತೆ ಕೇಂದ್ರ ಸರ್ಕಾರ ಅನುಮತಿ ನೀಡಿತ್ತು.

ಕೇಂದ್ರ ಅನುಮತಿ ನೀಡಿದ ಕೆಲವೇ ದಿನಗಳಲ್ಲಿ ನಾವು ಪ್ಲಾಸ್ಮಾ ಥೆರಪಿ ಆರಂಭಿಸಿದ್ದೆವು. ಒಟ್ಟು ನಾಲ್ಕು ರೋಗಿಗಳ ಮೇಲೆ ಪ್ರಯೋಗ  ಆರಂಭಿಸಲಾಗಿತ್ತು. ಈ ವರೆಗೂ ಫಲಿತಾಂಶ ಉತ್ತಮವಾಗಿ ಬಂದಿದೆ. ಸೋಂಕಿನಿಂದ ಚೇತರಿಸಿಕೊಂಡಿರುವ ಎಲ್ಲರೂ ಮುಂದೆ ಬಂದು ರಕ್ತದಾನ ಮಾಡಿ ಎಂದು ಮನವಿ ಮಾಡಿದ ಕೇಜ್ರಿವಾಲ್‌, ಆ ಮೂಲಕ ಸೋಂಕಿತರನ್ನು ರಕ್ಷಿಸಲು ನೆರವಾಗಬೇಕು ಎಂದು ಕೇಜ್ರಿವಾಲ್ ಮನವಿ  ಮಾಡಿದರು.
 

SCROLL FOR NEXT