ದೇಶ

ಕೊರೋನಾ ಆರ್ಭಟಕ್ಕೆ ಆಂಧ್ರ ಪ್ರದೇಶ ತತ್ತರ; ಸಂಸದನ ಕುಟುಂಬದ 6 ಸದಸ್ಯರಿಗೆ, ರಾಜಭವನದ 4 ಸಿಬ್ಬಂದಿಗೆ ವೈರಸ್ ಸೋಂಕು!

Srinivasamurthy VN

ಅಮರಾವತಿ: ಮಾರಕ ಕೊರೋನಾ ವೈರಸ್ ಗೆ ಆಂಧ್ರ ಪ್ರದೇಶ ತತ್ತರಿಸಿ ಹೋಗಿದ್ದು, ಆಡಳಿತಾ ರೂಢ ವೈಎಸ್ ಆರ್ ಕಾಂಗ್ರೆಸ್ ಪಕ್ಷದ ಸಂಸದನ ಕುಟುಂಬದ ಆರು ಸದಸ್ಯರಿಗೆ ಮತ್ತು ರಾಜಭವನದ ಸಿಬ್ಬಂದಿಗೇ ಸೋಂಕು ಕಾಣಿಸಿಕೊಂಡಿದೆ.

ಹೌದು.. ಆಂಧ್ರ ಪ್ರದೇಶದ ಕರ್ನೂಲು ಕ್ಷೇತ್ರದ ವೈಎಸ್ ಆರ್ ಸಿಪಿ ಸಂಸದ ಡಾ.ಸಂಜೀವ್ ಕುಮಾರ್ ಅವರ ಕುಟುಂಬದ ಆರು ಮಂದಿಗೆ ಕೊರೋನಾ ಸೋಂಕು ಕಂಡುಬಂದಿದೆ. ಸಂಜೀವ್ ಕುಮಾರ್ ಅವರ ತಂದೆ, ಸಹೋದರ ಮತ್ತು ಇತರೆ 4 ಮಂದಿಯಲ್ಲಿ ಸೋಂಕು ದೃಢಪಟ್ಟಿದೆ.  ಎಲ್ಲರನ್ನೂ ಕರ್ನೂಲು ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಹೀಗಾಗಿ ಇವರ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಿತ ವ್ಯಕ್ತಿಗಳನ್ನು ಕ್ವಾರಂಟೈನ್ ಮಾಡಲಾಗಿದೆ. ಇನ್ನು ಸಂಸದ ಸಂಜೀವ್ ಕುಮಾರ್ ಅವರೇ ಸ್ವತಃ ವೈದ್ಯರಾಗಿದ್ದು, ಯೂರಾಲಜಿಸ್ಟ್ ಆಗಿದ್ದಾರೆ. ಅವರ ಪತ್ನಿ ಕೂಡ  ವೈದ್ಯರೇ ಎಂದು ತಿಳಿದುಬಂದಿದೆ.

ಅಂತೆಯೇ ಅಂಧ್ರ ಪ್ರದೇಶ ರಾಜಭವನದ 4 ಸಿಬ್ಬಂದಿಗಳಲ್ಲೂ ಕೊರೋನಾ ವೈರಸ್ ಪಾಸಿಟಿವ್ ದೃಢವಾಗಿದೆ. ಮುಖ್ಯ ಭದ್ರತಾ ಅಧಿಕಾರಿ ಮತ್ತು ಮೂವರು ರಾಜಭವನದ ಸಹಾಯಕ ನರ್ಸ್ ಗಳಲ್ಲಿ ವೈರಸ್ ಸೋಂಕು ದೃಢವಾಗಿದೆ.

ಆಂಧ್ರ ಪ್ರದೇಶದಲ್ಲಿ ಸಾವಿರ ಗಡಿ ದಾಟಿದ ಸೋಂಕಿತರ ಸಂಖ್ಯೆ
ಇನ್ನು ಆಂಧ್ರಪ್ರದೇಶದಲ್ಲಿ ಇಂದು ಮತ್ತೆ 81 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು ಆ ಮೂಲಕ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 1,097ಕ್ಕೆ ಏರಿಕೆಯಾಗಿದೆ.

SCROLL FOR NEXT