ದೇಶ

ಉತ್ತರ ಪ್ರದೇಶ: ಬುಲಂದ್ಶೆಹರ್'ನಲ್ಲಿ ಇಬ್ಬರು ಸಾಧುಗಳ ಹತ್ಯೆ, ಒಬ್ಬನ ಬಂಧನ, ತನಿಖೆಗೆ ಸಿಎಂ ಆದೇಶ

Manjula VN

ಲಖನೌ: ಉತ್ತರ ಪ್ರದೇಸದ ಬುಲಂದ್ಶೆಹರ್ ನಲ್ಲಿರುವ ದೇವಾಲಯವೊಂದರ ಬಳಿ ಇಬ್ಬರು ಸಾಧುಗಳನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಸೋಮವಾರ ನಡೆದಿದೆ. 

ಸಾಧುಗಳ ಮೃತದೇಹಗಳು ದೇವಾಲಯದ ಬಳಿ ಬಿದ್ದಿದ್ದು, ದೇವಾಲಯಕ್ಕೆ ಬಂದ ಭಕ್ತಾದಿಗಳು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. 

ಕೂಡಲೇ ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ತನಿಖೆ ಆರಂಭಿಸಿದ್ದಾರೆ. 

ಪ್ರಾಥಮಿಕ ತನಿಖೆ ಪ್ರಕಾರ, ಹತ್ಯೆಯಾದ ಇಬ್ಬರು ಸಾಧುಗಳು ದೇವಾಲಯದಲ್ಲಿಯೇ ಉಳಿಯುತ್ತಿದ್ದರು. ಗಾಂಜಾ ವ್ಯಸನಿಯಾಗಿದ್ದ  ಮುರಾರಿ ಅಲಿಯಾಸ್ ರಾಜು ಎಂಬಾತ ಆಗಾಗ ದೇವಾಲಯಕ್ಕೆ ಬರುತ್ತಿದ್ದ. ಈ ವೇಳೆ ಸಾಧುಗಳ ಬಳಿಯಿದ್ದ ವಸ್ತುವನ್ನು ವ್ಯಕ್ತಿ ಕದ್ದಿದ್ದು, ಇದರಿಂದಾಗಿ ಇವರುಗಳ ನಡುವೆ ಜಗಳ ಏರ್ಪಟ್ಟಿದೆ. ಇದೇ ಕಾರಣಕ್ಕೇ ಮುರಾರಿ ಎಂಬಾತನು ಸಾಧುಗಳನ್ನು ಖಡ್ಗದಿಂದ ಹತ್ಯೆ ಮಾಡಿದ್ದಾನೆ ಎನ್ನಲಾಗುತ್ತಿದೆ. ಆರೋಪಿ ಮುರಾರಿ ದೇವಾಲಯದಿಂದ ಹೊರಗೆ ಹೋಗುವುದನ್ನು ನೋಡಿದ್ದೇವೆಂದು ಸ್ಥಳೀಯರು ಹೇಳಿದ್ದಾರೆ. 

ಆರೋಪಿಯನ್ನು ಗ್ರಾಮದಿಂದ 2 ಕಿ.ಮೀ ದೂರದಲ್ಲಿ ಬಂಧಿಸಲಾಗಿದ್ದು, ಈ ವೇಳೆ ಆರೋಪಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಹತ್ಯೆಯಾದ ಇಬ್ಬರು ಸಾಧುಗಳನ್ನು ಸಾಧು ಜಗನ್ದಾಸ್ (55) ಹಾಗೂ ಸೇವಾದಾಸ್ (35) ಎಂದು ಗುರ್ತಿಸಲಾಗಿದೆ. ಇಬ್ಬರೂ ಸಾಧುಗಳು ಪಗೊನಾ ಗ್ರಾಮದ ನಿವಾಸಿಗಳಾಗಿದ್ದು, ಕಳೆದ 10 ವರ್ಷಗಳಿಂದ ದೇವಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದರು ಎಂದು ಹೇಳಲಾಗುತ್ತಿದೆ. 

ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಈ ಸಂಬಂಧ ವರದಿ ಸಲ್ಲಿಸುವಂತೆ ಪೊಲೀಸರಿಗೆ ಸೂಚನೆ ನೀಡಿದ್ದರೆಂದು ತಿಳಿದುಬಂದಿದೆ.

SCROLL FOR NEXT