ದೇಶ

ಭಾರತದ ವೈದ್ಯರು ಬೇಕು ಎನ್ನುತ್ತಿರುವ ಕೊಲ್ಲಿ ದೇಶಗಳು, ಓಕೆ ಅಂದ್ರಾ ಪ್ರಧಾನಿ ಮೋದಿ?

Srinivas Rao BV

ನವದೆಹಲಿ: ಕೊರೊನಾ ವಿರುದ್ಧ ಸಮರದಲ್ಲಿ ಭಾರತೀಯ ಸೇನಾ ವೈದ್ಯರು, ಅರೆ ವೈದ್ಯಕೀಯ ಸಿಬ್ಬಂದಿ ಸಲ್ಲಿಸಿರುವ ಸೇವೆಯನ್ನು ಕುವೈತ್ ದೇಶ ಕೊಂಡಾಡಿದೆ. ಮತ್ತಷ್ಟು ಇಂತಹ ವೈದ್ಯರ ತಂಡಗಳನ್ನು ತನ್ನ ದೇಶಕ್ಕೆ ಕಳಹಿಸಿಕೊಡಬೇಕು ಎಂದು ಪ್ರಧಾನಿ ಮೋದಿ ಅವರಿಗೆ ಲಿಖಿತವಾಗಿ ಮನವಿ ಸಲ್ಲಿಸಿದೆ. 

ಇನ್ನು ಸಂಯುಕ್ತ ಅರಬ್ ಒಕ್ಕೂಟವೂ ಸಹ ತನ್ನ ದೇಶಕ್ಕೆ ಭಾರತದ ಮಾಜಿ ಸೇನಾ ವೈದ್ಯ ಸಿಬ್ಬಂದಿಯನ್ನು ಕಳುಹಿಸಿಕೊಡುವಂತೆ   ಭಾರತಕ್ಕೆ ಮನವಿ ಮಾಡಿದೆ. ಈ ಸಂಬಂಧ ಕೊಲ್ಲಿ ದೇಶಗಳಿಗೆ ನೆರವು ಕಲ್ಪಿಸಲು ಪ್ರಧಾನಿ ಮೋದಿ ತಾತ್ವಿಕವಾಗಿ ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ.

ಕೊರೊನಾ ವಿರುದ್ಧ ಹೋರಾಟದಲ್ಲಿ ಕುವೈತ್ ಗೆ ಬೆಂಬಲ ನೀಡಲು ಪ್ರಧಾನಿ ಮೋದಿ 15 ಮಂದಿ ವೈದ್ಯಕೀಯ ಸಿಬ್ಬಂದಿ ಒಳಗೊಂಡ ಸೇನಾ ಕ್ಷಿಪ್ರ ಪ್ರತಿಕ್ರಿಯಾ ತಂಡವನ್ನು ಕಳುಹಿಸಿದ್ದರು.

ಭಾರತೀಯ ಸೇನೆಯ ವೈದ್ಯಕೀಯ ತಂಡದ ಕಾರ್ಯ ಅಲ್ಲಿನ ಸರ್ಕಾರದ ಮೆಚ್ಚುಗೆಗೆ ಪಾತ್ರವಾಗಿದೆ.  ಆದರೆ, ವೈದ್ಯಕೀಯ ತಂಡ ತನ್ನ ಕಾರ್ಯ ಪೂರ್ಣಗೊಳಿಸಿ ಭಾರತಕ್ಕೆ ವಾಪಸ್ಸಾದ ಸ್ವಲ್ಪ ಸಮಯದಲ್ಲೇ   ಕುವೈತ್ ನಿಂದ ಭಾರತ ಸರ್ಕಾರಕ್ಕೆ ಮತ್ತೊಂದು ಮನವಿ ಮಾಡಿಕೊಂಡಿದೆ.

ಇನ್ನೂ ಕೆಲವು ವೈದ್ಯ ತಂಡಗಳನ್ನು ಕುವೈತ್ ಗೆ ಕಳುಹಿಸಿಕೊಡಬೇಕೆಂದು, ಅಲ್ಲಿನ ಸರ್ಕಾರ   ಅಧಿಕೃತವಾಗಿ ಕೋರಿದ್ದು, ಇದೇ ಸಮಯದಲ್ಲಿ ಸಂಯುಕ್ತ ಅರಬ್ ಎಮಿರೇಟ್ಸ್ ಕೂಡಾ ಇದೇ ರೀತಿಯ  ಮನವಿ ಸಲ್ಲಿಸಿದೆ. ಮಾರಿಷಸ್, ಕ್ಯಾಮರೂನ್ ಮತ್ತಿತರ ದೇಶಗಳು ಸಹ ತಮಗೆ ಭಾರತೀಯ ವೈದ್ಯ  ತಂಡದ ಸಹಾಯ ಅಗತ್ಯವಾಗಿದೆ ಎಂದು ಸರಕಾರಕ್ಕೆ ಮೌಖಿಕವಾಗಿ ಮನವಿ ಸಲ್ಲಿಸಿರುವ ಮಾಹಿತಿ ಲಭ್ಯವಾಗಿದೆ. ಪ್ರಧಾನಿ ಮೋದಿ ಈ ಮನವಿಗಳಿಗೆ ತಾತ್ವಿಕವಾಗಿ ಸಮ್ಮತಿಸಿದ್ದಾರೆ ಎಂದು ತಿಳಿದುಬಂದಿದೆ.

SCROLL FOR NEXT