ದೇಶ

ಸುಶಾಂತ್ ಸಿಂಗ್ ಆತ್ಮಹತ್ಯೆ: ಸುಪ್ರೀಂ ಕೋರ್ಟ್ ನಲ್ಲಿ ನಟಿ ರಿಯಾ ಮನವಿ ವಿಚಾರಣೆಗೆ ದಿನಾಂಕ ನಿಗದಿ

Raghavendra Adiga

ನವದೆಹಲಿ: ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದಂತೆ ಪಾಟ್ನಾದಿಂದ ಮುಂಬೈಗೆ ಎಫ್ಐಆರ್ ವರ್ಗಾವಣೆ ಕೋರಿ ನಟಿ ರಿಯಾ ಚಕ್ರವರ್ತಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಆಗಸ್ಟ್ 5 ರಂದು ವಿಚಾರಣೆ ನಡೆಸಲಿದೆ.

ಸುಪ್ರೀಂ ಕೋರ್ಟ್‌ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾದ ದಾಖಲೆಗಳಂತೆ ಪಟ್ಟಿಯ ಪ್ರಕಾರ, ಚಕ್ರವರ್ತಿ ಸಲ್ಲಿಸಿದ್ದ ವರ್ಗಾವಣೆ ಅರ್ಜಿ ನ್ಯಾಯಮೂರ್ತಿ ಹೃಷಿಕೇಶ ರಾಯ್ ಅವರ ನ್ಯಾಯಪೀಠದ ಮುಂದೆ ಬುಧವಾರ ವಿಚಾರಣೆಗೆ ಬರಲಿದೆ.

34 ವರ್ಷದ ರಜಪೂತ್ ಜೂನ್ 14 ರಂದು ಮುಂಬೈನ ಉಪನಗರ ಬಾಂದ್ರಾದಲ್ಲಿರುವ ತನ್ನ ಅಪಾರ್ಟ್ ಮೆಂಟಿನಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅಂದಿನಿಂದ ಮುಂಬೈ ಪೊಲೀಸರು ವಿವಿಧ ಆಯಾಮಗಳಿಂದ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಇನ್ನೊಂದೆಡೆ  ಚಕ್ರವರ್ತಿಯವರ ಮನವಿಯ ಮೇಲೆ ಯಾವುದೇ ಆದೇಶ ಹೊರಡಿಸುವ ಮೊದಲು ವಿಚಾರಣೆ ನಡೆಸಬೇಕೆಂದು ಕೋರಿ, ಬಿಹಾರ ಮತ್ತು ಮಹಾರಾಷ್ಟ್ರದ ಸರ್ಕಾರಗಳು ಈಗಾಗಲೇ ಉನ್ನತ ನ್ಯಾಯಾಲಯದಲ್ಲಿ ಕೇವಿಯಟ್ ಸಲ್ಲಿಸಿವೆ. 

ಆತ್ಮಹತ್ಯೆ ಪ್ರಕರಣದಲ್ಲಿ ಬಿಹಾರದಲ್ಲಿ ದಾಖಲಾದ ಎಫ್‌ಐಆರ್ ವರ್ಗಾವಣೆ ಕೋರಿ, ನಟಿ ರಿಯಾ ಚಕ್ರವರ್ತಿ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ದಿವಂಗತ ನಟನ ತಂದೆ ಕೃಷ್ಣ ಕಿಶೋರ್ ಸಿಂಗ್ ಕೂಡ ಈ ವಿಷಯದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ಕೇವಿಯಟ್ ಸಲ್ಲಿಸಿದ್ದಾರೆ.

ಕೇವಿಯಟ್ ಎನ್ನುವುದು ಎದುರಾಳಿಗೆ ನೋಟೀಸ್ ಅಥವಾ  ವಿಚಾರಣೆಯಿಲ್ಲದೆ ಒಂದು ಪಕ್ಷಕ್ಕೆ ಅನುಕೂಲಕರವಾದ ಯಾವ ಆದೇಶ ಪಡೆಯಲು ಸಾಧ್ಯವಾಗದಂತೆ ಮಾಡುವುದನ್ನು ಖಚಿತಪಡಿಸಿಕೊಳ್ಳಲು ತೆಗೆದುಕೊಳ್ಳಲಾದ ಪೂರ್ವಭಾವಿ ಕಾನೂನು ಕ್ರಮವಾಗಿದೆ.

ಜುಲೈ 25 ರಂದು ರಜಪೂತ್ ಅವರ ತಂದೆ ಪಾಟ್ನಾದ ರಾಜೀವ್ ನಗರ ಪೊಲೀಸ್ ಠಾಣೆಯಲ್ಲಿ ಚಕ್ರವರ್ತಿ ಮತ್ತು ಅವರ ಕುಟುಂಬ ಸದಸ್ಯರು ಸೇರಿದಂತೆ ಆರು ಮಂದಿಯ ವಿರುದ್ಧ ನಟನ ಆತ್ಮಹತ್ಯೆಗೆ ಸಹಕರಿಸಿದ್ದಾರೆ ಎಂದು ಆರೋಪಿಸಿ ಎಫ್ಐಆರ್ ದಾಖಲಿಸಿದ್ದರು.

SCROLL FOR NEXT