ದೇಶ

ರಾಜಸ್ತಾನ: ಮುಖ್ಯ ಸಚೇತಕರಿಗೆ ಪತ್ರ ಬರೆದ ಸಚಿನ್ ಪೈಲಟ್, ಗೆಹ್ಲೋಟ್ ಸರ್ಕಾರಕ್ಕೆ ಬಹುಮತವಿಲ್ಲ ಎಂದ ಬಿಜೆಪಿ

Sumana Upadhyaya

ಜೈಪುರ/ನವದೆಹಲಿ: ಕಳೆದ 15-20 ದಿನಗಳಿಂದ ನಡೆಯುತ್ತಿದ್ದ ರಾಜಸ್ತಾನ ರಾಜಕೀಯ ಹೈಡ್ರಾಮಾ ಇದೀಗ ಒಂದು ಹಂತಕ್ಕೆ ತಲುಪಿದ್ದು ಬಂಡಾಯ ನಾಯಕ ಸಚಿನ್ ಪೈಲಟ್ ಪಕ್ಷದ ಮುಖ್ಯ ಸಚೇತಕ ಮಹೇಶ್ ಜೋಶಿಯವರಿಗೆ ಬರೆದಿದ್ದಾರೆ.

ಅದರಲ್ಲಿ ಸಚಿನ್ ಪೈಲಟ್ ತಾವು ಕಾಂಗ್ರೆಸ್ ಸರ್ಕಾರದ ಭಾಗವಾಗಿ ಮತ್ತು ಪಕ್ಷದಲ್ಲಿ ಮುಂದುವರಿಯಲು ಬಯಸುತ್ತಿದ್ದು ಹಿಂದಿನ ಎರಡು ಕಾಂಗ್ರೆಸ್ ಶಾಸಕಾಂಗ ಪಕ್ಷ ಸಭೆಗೆ ತಾವು ಮತ್ತು 18 ಮಂದಿ ಶಾಸಕರು ಏಕೆ ಭಾಗವಹಿಸಲಿಲ್ಲ ಎಂದು ವಿವರ ನೀಡಿದ್ದಾರೆ.

ಮಹೇಶ್ ಜೋಶಿಯವರಿಗೆ ಇ ಮೇಲ್ ಕಳುಹಿಸಿರುವ ಪೈಲಟ್, ತಮ್ಮ ಮತ್ತು ತಮ್ಮನ್ನು ಬೆಂಬಲಿಸಿಕೊಂಡು ಬಂದ 18 ಮಂದಿ ಶಾಸಕರು ಸರ್ಕಾರವನ್ನು ಉರುಳಿಸಲು ಪ್ರಯತ್ನಿಸುತ್ತಿದ್ದಾರೆ ಎಂಬ ತಪ್ಪು, ಸುಳ್ಳು ಆರೋಪಕ್ಕೆ ಸಂಬಂಧಿಸಿದಂತೆ ಕಾನೂನಿನ ಪರಿಹಾರ ಕಂಡುಕೊಳ್ಳುವ ಕೆಲಸದಲ್ಲಿ ತೊಡಗಿದ್ದರಿಂದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಗೆ ಹಾಜರಾಗಲಿಲ್ಲ ಎಂದು ಹೇಳಿದ್ದಾರೆ ಎಂಬುದಾಗಿ ಕಾಂಗ್ರೆಸ್ ಮೂಲಗಳು ತಿಳಿಸಿವೆ. ಸಚಿನ್ ಪೈಲಟ್ ಮತ್ತು 18 ಮಂದಿ ವಿರುದ್ಧ ಎಫ್ ಐಆರ್ ದಾಖಲಿಸಿ ಲೀಗಲ್ ನೊಟೀಸ್ ಕೂಡ ಕಳುಹಿಸಲಾಗಿತ್ತು.

ಸಚಿನ್ ಪೈಲಟ್ ಕೇಸಿನಲ್ಲಿ ತಮ್ಮ ಹಿಡಿತ ಹೆಚ್ಚಿಸಿಕೊಳ್ಳಲು ಈ ನಡೆ ತೋರಿಸುತ್ತಿದ್ದಾರೆ ಎಂಬ ಸಂಶಯ ಕಾಂಗ್ರೆಸ್ ಗೆ ಬಂದಿದ್ದು ಅದು ಎಚ್ಚರಿಕೆಯಿಂದ ಹೆಜ್ಜೆಯಿಡಲು ನೋಡುತ್ತಿದೆ. ಪಕ್ಷಾಂತರ ಬದಲು ಪಕ್ಷದಲ್ಲಿ ಭಿನ್ನಾಭಿಪ್ರಾಯ ಬಂದು, ತಾವು ಮತ್ತು ತಮ್ಮ ನಿಷ್ಠಾವಂತ ಶಾಸಕರು ನಾಯಕತ್ವ ಬದಲಾವಣೆ ಮಾಡಬೇಕು ಎಂಬ ವಾದಕ್ಕೆ ಕಾನೂನುಬದ್ಧವಾಗಿ ಮುಂದುವರಿಯುವ ಸಚಿನ್ ಪೈಲಟ್ ಪ್ರಯತ್ನವಿದು ಎಂದು ಕಾಂಗ್ರೆಸ್ ನ ಮೂಲಗಳು ಹೇಳುತ್ತಿವೆ.

ಇನ್ನೊಂದೆಡೆ ವಿಧಾನಸಭೆಯಲ್ಲಿ ಸರ್ಕಾರಕ್ಕೆ ಬೆಂಬಲ ನೀಡುವ ಶಾಸಕರ ಸಂಖ್ಯೆ ಕಡಿಮೆಯಾಗಬಾರದು, ಎಂಬ ದೃಷ್ಟಿಯಿಂದ ಆಗಸ್ಟ್ 14ರ ವಿಧಾನಸಭೆ ಅಧಿವೇಶನಕ್ಕೆ ಮುನ್ನ ಭಿನ್ನಮತೀಯ ಶಾಸಕರನ್ನು ಸೆಳೆಯಲು ಅಶೋಕ್ ಗೆಹ್ಲೊಟ್ ಪ್ರಯತ್ನಿಸುತ್ತಿದ್ದಾರೆ.
ಇನ್ನೊಂದೆಡೆ ವಿರೋಧ ಪಕ್ಷ ಮುಖ್ಯಮಂತ್ರಿ ವಿರುದ್ಧ ಹರಿಹಾಯ್ದಿದ್ದು, ಮುಖ್ಯಮಂತ್ರಿ ಗೆಹ್ಲೋಟ್ ಗೆ ತಮ್ಮ ಶಾಸಕರ ಮೇಲೆ ನಂಬಿಕೆಯಿಲ್ಲ, ವಿಧಾನಸಭೆಯಲ್ಲಿ ಅವರಿಗೆ ಬಹುಮತವಿಲ್ಲ ಎಂದು ಹೇಳಿದೆ.

ಜೈಸಲ್ಮರ್ ನಲ್ಲಿ ಫೈವ್ ಸ್ಟಾರ್ ಹೊಟೇಲ್ ನಲ್ಲಿ ಸರ್ಕಾರದ ಶಾಸಕರಿದ್ದಾರೆ. ತಮ್ಮ ಸಚಿವರು, ಶಾಸಕರ ಮೇಲೆ ಮುಖ್ಯಮಂತ್ರಿಗಳಿಗೆ ನಂಬಿಕೆಯಿಲ್ಲ, ಹೀಗಾಗಿ ಅವರನ್ನು ಹೊಟೇಲ್ ನಲ್ಲಿ ತೀವ್ರ ಭದ್ರತೆಯ ನಡುವೆ ಕೂಡಿ ಹಾಕಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಸತೀಶ್ ಪೂನಿಯಾ ಹೇಳಿದ್ದಾರೆ.

SCROLL FOR NEXT