ದೇಶ

ಅಯೋಧ್ಯೆ ರಾಮಮಂದಿರ ಶಿಲಾನ್ಯಾಸ: ದೇಗುಲದಲ್ಲಿ 3 ಗಂಟೆ ಉಳಿಯಲಿರುವ ಪ್ರಧಾನಿ ಮೋದಿ, ಪ್ರಸಾದ ವಿತರಣೆ ಇಲ್ಲ

Srinivasamurthy VN

ಲಖನೌ: ಅಯೋಧ್ಯೆ ಶ್ರೀರಾಮಮಂದಿರದ ಭೂಮಿ ಪೂಜೆಗೆ ಸಕಲ ಸಿದ್ಧತೆ ಪೂರ್ಣಗೊಂಡಿದ್ದು ನಾಳೆ ಅಯೋಧ್ಯೆಗೆ ಆಗಮಿಸಲಿರುವ ಪ್ರಧಾನಿ ಮೋದಿ 3 ಗಂಟೆಗಳ ಕಾಲ ಇರಲಿದ್ದಾರೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸುದ್ದಿಸಂಸ್ಥೆ ವರದೆ ಮಾಡಿದ್ದು, ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮದ ಆರಂಭದ ಐತಿಹಾಸಿಕ ಕ್ಷಣಕ್ಕೆ ಕೌಂಟ್ ಡೌನ್ ಶುರುವಾಗಿದೆ. ಪ್ರಧಾನಿ ಮೋದಿಯವರು ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಅಂದಾಜು 3 ಗಂಟೆ ಹೊತ್ತು ಪಾಲ್ಗೊಳ್ಳಲಿದ್ದಾರೆ. ಅವರು ನಾಳೆ ಬೆಳಗ್ಗೆ ದೆಹಲಿಯಿಂದ ಹೊರಟು ವಿಮಾನದಲ್ಲಿ ಆಗಮಿಸಲಿದ್ದು, ಅವರ ಜತೆಗೆ ಕೆಲವು ಹಿರಿಯ ನಾಯಕರೂ ಪಾಲ್ಗೊಳ್ಳಲಿದ್ದಾರೆ.

ಮೋದಿ ಅವರ ಪ್ರವಾಸ ಪಟ್ಟಿಯ ಪ್ರಕಾರ ಆಗಸ್ಟ್​ 5ರಂದು ಬೆಳಗ್ಗೆ 9.30ಕ್ಕೆ ವಿಶೇಷ ವಿಮಾನದ ಮೂಲಕ ಲಖನೌಗೆ ಆಗಮಿಸಲಿರುವ ಮೋದಿ ಅಲ್ಲಿಂದ ಹೆಲಿಕಾಫ್ಟರ್ ಮೂಲಕ ಅಯೋಧ್ಯೆಗೆ ತೆರಳಲಿದ್ದಾರೆ. ಅಯೋಧ್ಯೆಗೆ ಅವರು ಬೆಳಗ್ಗೆ 11.30ಕ್ಕೆ ತಲುಪುವ ನಿರೀಕ್ಷೆ ಇದ್ದು, ನಂತರ ಭೂಮಿ ಪೂಜೆಯ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.  

ಅಯೋಧ್ಯೆಯಲ್ಲಿ ಅವರು ಹನುಮಗಡಿ ದೇವಾಲಯದಲ್ಲಿ ಮೊದಲು ಪೂಜೆ ಸಲ್ಲಿಸಲಿಸದ್ದಾರೆ. ನಂತರ ರಾಮಜನ್ಮಭೂಮಿ ಸ್ಥಳಕ್ಕೆ ತಲುಪಿ ಅಲ್ಲಿ ಭೂಮಿ ಪೂಜೆಯಲ್ಲಿ ಭಾಗಿಯಾಗುತ್ತಾರೆ. ಮಧ್ಯಾಹ್ನ 12.40ಕ್ಕೆ ಶ್ರೀರಾಮಮಂದಿರಕ್ಕೆ ಶಿಲಾನ್ಯಾಸ ನಡೆಯಲಿದ್ದು, ಅದರಲ್ಲಿ ಭಾಗಿಯಾದ ನಂತರ 2 ಗಂಟೆ ಸುಮಾರಿಗೆ ಅಯೋಧ್ಯೆಯಿಂದ ಲಖನೌಗೆ ಹೆಲಿಕಾಫ್ಟರ್ ಮೂಲಕ ಹಿಂದಿರುಗಲಿದ್ದು, ಅಲ್ಲಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ವಾಪಸಾಗಲಿದ್ದಾರೆ.

ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್​ ಈ ಶಿಲಾನ್ಯಾಸ ಕಾರ್ಯಕ್ರಮಕ್ಕೆ 175 ಗಣ್ಯ ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ.

SCROLL FOR NEXT