ದೇಶ

ನಟ ಸುಶಾಂತ್ ಸಿಂಗ್ ಸಾವು ಪ್ರಕರಣ: ಸಿಬಿಐಗೆ ತನಿಖೆ ಜವಾಬ್ದಾರಿ, ಬಿಹಾರ ಸರ್ಕಾರದ ಮಹತ್ವದ ನಿರ್ಧಾರ

Manjula VN

ಪಾಟ್ನ: ಬಾಲಿವುಡ್ ನಟ ಸುಶಾಂತ್ ಸಿಂಗ್ ಸಾವು ಪ್ರಕರಣ ಸಂಬಂಧ ಬಿಹಾರ ಸರ್ಕಾರ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದು, ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿದೆ ಎಂದು ಮಂಗಳವಾರ ತಿಳಿದುಬಂದಿದೆ. 

ಸುಶಾಂತ್ ಸಿಂಗ್ ಸಾವು ಕುರಿತಂತೆ ಸಾಕಷ್ಟು ಅನುಮಾನಗಳು ಮೂಡತೊಡಗಿದ್ದು, ಸಾವಿನ ಹಿಂದೆ ಕಾಣದ ಕೈಗಳ ಕೈವಾಡವಿದೆ ಎಂದು ಕುಟುಂಬಸ್ಥರು ಆರೋಪಿಸುತ್ತಲೇ ಇದ್ದಾರೆ. 

ಇದರಂತೆ ಸುಶಾಂತ್ ಅವರ ತಂದೆ ಕೆಕೆ. ಸಿಂಗ್ ಅವರು ಬಿಹಾರ ರಾಜ್ಯ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಲ್ಲಿ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಮನವಿ ಮಾಡಿಕೊಂಡಿದ್ದರು. 

ಸುಶಾಂತ್ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಹಾರದ ಮುಂಬೈಗೆ ಆಗಮಿಸಿದ್ದ ಬಿಹಾರ ರಾಜ್ಯ ಪೊಲೀಸ್ ಅಧಿಕಾರಿಯೊಬ್ಬರನ್ನು ಈ ಹಿಂದೆ ಮಹಾರಾಷ್ಟ್ರ ಸರ್ಕಾರ ಕ್ವಾರಂಟೈನ್ ಮಾಡಿತ್ತು. 

ಪಾಟ್ನದ ಪೂರ್ವ ವಿಭಾಗದ ಎಸ್'ಪಿ ವಿನಯ್ ತಿವಾರಿ ಅವರನ್ನು ಕ್ವಾರಂಟೈನ್ ಗೊಳಪಡಿಸಲಾಗಿತ್ತು. ರಜಪೂತ್ ಅವರನ್ನು ಆತ್ಮಹತ್ಯೆ ಮಾಡಿಕೊಳ್ಳುವಂತೆ ಪ್ರಚೋದಿಸಲಾಗಿದೆ ಎಂದು ಸುಶಾಂತ್ ಅವರ ತಂದೆ ತೂರು ನೀಡಿದ ಕಾರಣ. ತನಿಖೆಗಾಗಿ ತಿವಾರಿಯವರು ಮುಂಬೈಗೆ ತೆರಳಿದ್ದರು. ಈ ವೇಳೆ ಕೊರೋನಾ ವೈರಸ್ ಕಾರಣ ಹೊರರಾಜ್ಯದವರು ಕ್ವಾರಂಟೈನ್ ಆಗಬೇಕು ಎಂಬ ನಿಮಯ ಇರುವ ಹಿನ್ನೆಲೆಯಲ್ಲಿ ಆಗಸ್ಟ್ 15ರವರೆಗೆ ಸಾಂಸ್ಥಿಕ ಕ್ವಾರಂಟೈನ್'ಗೊಳಪಡಿಸಲಾಗಿದೆ. ಅವರ ಕೈ ಮೇಲೆ ಕ್ವಾರಂಟೈನ್ ಸೀಲ್ ಕೂಡ ಹಾಕಲಾಗಿತ್ತು. ಇದಕ್ಕೆ ಬಿಹಾರ ರಾಜ್ಯ ಮುಖ್ಯಮಂತ್ರಿಗಳು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು. ಮಹಾರಾಷ್ಟ್ರ ಸರ್ಕಾರದ ಕ್ರಮ ಸೂಕ್ತವಾದುದಲ್ಲ. ಹೀಗಾಗಿ ಈ ಬಗ್ಗೆ ಬಿಹಾರ ಡಿಜಿಪಿ ಅವರು ಮಹಾರಾಷ್ಟ್ರ ಡಿಜಿಪಿ ಜೊತೆಗೆ ಮಾತನಾಡಲಿ ಎಂದಿದ್ದರು. 

ಈ ಎಲ್ಲಾ ಬೆಳವಣಿಗೆಗಳ ಬಳಿಕ ಸುಶಾಂತ್ ಅವರ ತಂದೆ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಿದ್ದರು. ಈ ಆಗ್ರಹಕ್ಕೆ ಮಣಿದ ಬಿಹಾರ ರಾಜ್ಯ ಮುಖ್ಯಮಂತ್ರಿಗಳು ಇದೀಗ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಿ ಮಹತ್ವದ ಆದೇಶ ಹೊರಡಿಸಿದ್ದಾರೆ. 

SCROLL FOR NEXT