ದೇಶ

ಕೃಷಿ ಮೂಲಸೌಕರ್ಯಗಳಿಗೆ 1 ಲಕ್ಷ ಕೋಟಿ ನಿಧಿ ಬಿಡುಗಡೆ ಮಾಡಲಿರುವ ಪ್ರಧಾನಿ ಮೋದಿ!

Srinivasamurthy VN

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೇಶದ ಕೃಷಿ ವಲಯ ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ೧ ಲಕ್ಷ ಕೋಟಿ ರೂ. ನಿಧಿ ಬಿಡುಗಡೆ ಮಾಡಲಿದ್ದಾರೆ. 

ಭಾನುವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಈ ನಿಧಿ ಬಿಡುಗಡೆ ಮಾಡಲಿದ್ದಾರೆ. ಆದೇ ರೀತಿ ಪ್ರಧಾನ ಮಂತ್ರಿ ಕಿಸಾನ್ ಯೋಜನೆಯಡಿ ದೇಶದ 8.5 ಕೋಟಿ ರೈತರಿಗೆ 6 ನೇ ಕಂತಾಗಿ 17,000 ಕೋಟಿ ರೂ. ಬಿಡುಗಡೆ ಮಾಡಲಿದ್ದಾರೆ. ಈ ಸಂಬಂಧ ಶನಿವಾರ ಹೇಳಿಕೆ ಬಿಡುಗಡೆ ಮಾಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಬಿಡುಗಡೆ ಮಾಡಲಿರುವ 1 ಲಕ್ಷ ಕೋಟಿ ರೂ ನಿಧಿಯ ಮೂಲಕ ದೇಶದ ವಿವಿಧ ಭಾಗಗಳಲ್ಲಿ ಕೃಷಿ ಉತ್ಪನ್ನಗಳಿಗೆ ಅಗತ್ಯವಾದ ಮೂಲಸೌಕರ್ಯ ಕಲ್ಪಿಸಲು ಬಳಸಲಾಗುವುದು. ರೈತರು ಬೆಳೆದ ಬೆಳೆಗಳನ್ನು ಸಂರಕ್ಷಿಸಲು ಕೋಲ್ಡ್ ಸ್ಟೋರೇಜ್ ಸ್ಥಾಪನೆ, ಸಂಸ್ಕರಣಾ ಘಟಕಗಳು ಹಾಗೂ  ಇನ್ನಿತರ ಸೌಲಭ್ಯಗಳನ್ನು ಸ್ಥಾಪಿಸಲಾಗುವುದು.

ಈ ಮೂಲಕ ರೈತರ ಬೆಳೆಗಳಿಗೆ ಹೆಚ್ಚಿನ ಬೆಲೆ ಕಲ್ಪಿಸಲು ಸಾಧ್ಯವಾಗಲಿದೆ. ಅಲ್ಲದೆ ರೈತರು ತಾವು ಬೆಳೆದ ಉತ್ಪನ್ನಗಳನ್ನು ಹತಾಶೆಯ ಬೆಲೆಗಳಿಗೆ ಮಾರಾಟಮಾಡದೆ ಅವುಗಳನ್ನು ಹೆಚ್ಚಿನ ಕಾಲ ಶೀತಲ ಗೃಹಗಳಲ್ಲಿ ಸಂಗ್ರಹಿಸಿ, ಸೂಕ್ತ ಬೆಲೆ ಬಂದಾಗ ಮಾರಾಟ ಮಾಡಬಹುದು. ಈ ಮೂಲ ಸೌಕರ್ಯಗಳ ಕಲ್ಪಿಸಲು  ಅಗತ್ಯವಿರುವ ಸಾಲ ನೀಡಲು 1 ಲಕ್ಷ ಕೋಟಿ ರೂ. ನಿಧಿ ವಿನಿಯೋಗಿಸಲಾಗುವುದು.

ಕೃಷಿ ಮೂಲಸೌಕರ್ಯ ನಿಧಿಯಡಿ ಪ್ರಧಾನಿ ಮೋದಿ ಹಣ ಬಿಡುಗಡೆ ಮಾಡಲಿದ್ದಾರೆ. ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಕೂಡ ವಿಡಿಯೋ ಕಾನ್ಫರೆನ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ದೇಶದ ವಿವಿಧ ಪ್ರದೇಶಗಳ ರೈತರು ಸಹ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

SCROLL FOR NEXT