ದೇಶ

ಉತ್ತರ ಪ್ರದೇಶ: ಬಿಜೆಪಿ ನಾಯಕನ ಹತ್ಯೆ, ತನಿಖೆಗೆ ಸಿಎಂ ಯೋಗಿ ಆದಿತ್ಯನಾಥ್ ಆದೇಶ

Sumana Upadhyaya

ಉತ್ತರ ಪ್ರದೇಶ: ತಮ್ಮ ಮನೆಯ ಸಮೀಪ ತೋಟದಲ್ಲಿ ಬೆಳಗಿನ ಹೊತ್ತು ವಾಕಿಂಗ್ ಮಾಡುತ್ತಿದ್ದ ಬಿಜೆಪಿ ನಾಯಕನನ್ನು ಗುಂಡಿಕ್ಕಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಬಾಘ್ ಪತ್ ಜಿಲ್ಲೆಯ ಗ್ರಾಮದಲ್ಲಿ ನಡೆದಿದೆ.

ಬಿಜೆಪಿಯ ಮಾಜಿ ಜಿಲ್ಲಾಧ್ಯಕ್ಷ ಸಂಜಯ್ ಖೋಖರ್ ಎಂಬವರನ್ನು ಇಂದು ಬೆಳಗ್ಗೆ ದುಷ್ಕರ್ಮಿಗಳು ಅವರ ಮನೆಯ ಸಮೀಪ ಬೆಳಗ್ಗೆ ವಾಕಿಂಗ್ ಮಾಡುತ್ತಿದ್ದ ವೇಳೆ ಗುಂಡಿಕ್ಕಿ ಕೊಂದು ಹಾಕಿದ್ದು ಸುದ್ದಿ ತಿಳಿದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ತನಿಖೆಗೆ ಆದೇಶ ಹೊರಡಿಸಿದ್ದಾರೆ, ಅಲ್ಲದೆ 24 ಗಂಟೆಯೊಳಗೆ ಘಟನೆಗೆ ಸಂಬಂಧಿಸಿದಂತೆ ವರದಿ ನೀಡಬೇಕೆಂದು ಹೇಳಿದ್ದಾರೆ.

ಸಂಜಯ್ ಖೋಖರ್ ಅವರ ಮೃತದೇಹ ಅವರ ಕಬ್ಬಿನ ಗದ್ದೆಯ ಸಮೀಪ ರಕ್ತದ ಮಡುವಿನಲ್ಲಿ ಬಿದ್ದಿತ್ತು. ಸ್ಥಳದಲ್ಲಿ ಪೊಲೀಸರು ಮತ್ತು ಸ್ಥಳೀಯರು ಜಮಾಯಿಸಿದ್ದಾರೆ. ಮೂವರು ದುಷ್ಕರ್ಮಿಗಳು ಕೊಲೆಯಲ್ಲಿ ಭಾಗಿಯಾಗಿರಬಹುದು ಎಂದು ಹೇಳಲಾಗಿದೆ.

ವೈಯಕ್ತಿಕ ದ್ವೇಷದಿಂದ ಗುಂಡಿಕ್ಕಿ ಕೊಲೆ ಮಾಡಿರಬಹುದು ಎಂದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಆದರೂ ಈ ಬಗ್ಗೆ ಸಮಗ್ರ ತನಿಖೆ ನಡೆಸಿ ಆರೋಪಿಗಳನ್ನು ಸದ್ಯದಲ್ಲಿಯೇ ಬಂಧಿಸಲು ಪ್ರಯತ್ನಿಸಲಾಗುವುದು. ಘಟನೆಗೆ ಸಂಬಂಧಪಟ್ಟಂತೆ ಯಾರೂ ಪ್ರತ್ಯಕ್ಷದರ್ಶಿಗಳು ಇಲ್ಲ ಎಂದು ಬಾಘ್ ಪತ್ ಪೊಲೀಸ್ ಮುಖ್ಯಸ್ಥ ಅಜಯ್ ಕುಮಾರ್ ತಿಳಿಸಿದ್ದಾರೆ.

ಕಳೆದ ತಿಂಗಳು ರಾಷ್ಟ್ರೀಯ ಲೋಕ ದಳ ನಾಯಕ ದೇಶ್ ಪಾಲ್ ಖೋಖರ್ ಅವರನ್ನು ಸಹ ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.

SCROLL FOR NEXT