ದೇಶ

ಎಲ್ ಒಸಿಯಿಂದ ಹಿಡಿದು ಎಲ್ಎಸಿಯವರೆಗೆ ಸವಾಲಿನ ಸಂದರ್ಭದಲ್ಲಿ ಭಾರತ ತಕ್ಕ ಪ್ರತ್ಯುತ್ತರ ನೀಡಿದೆ: ಪ್ರಧಾನಿ ಮೋದಿ 

Sumana Upadhyaya

ನವದೆಹಲಿ: ದೇಶದ ಸಾರ್ವಭೌಮತ್ವ, ಸ್ವಾಯತ್ತತೆಗೆ ಧಕ್ಕೆಯನ್ನುಂಟುಮಾಡಲು ಯತ್ನಿಸುವವರಿಗೆ ಭಾರತೀಯ ಯೋಧರು ಗಡಿ ನಿಯಂತ್ರಣ ರೇಖೆಯಿಂದ ಹಿಡಿದು ಗಡಿ ವಾಸ್ತವ ರೇಖೆಯವರೆಗೆ ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ಪ್ರಧಾನಿ ಶನಿವಾರ 74ನೇ ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಪ್ರಸ್ತಾಪಿಸಿದ್ದಾರೆ.

ಗಡಿ ವಾಸ್ತವ ರೇಖೆ(ಎಲ್ ಒಸಿ)ಯಿಂದ ಹಿಡಿದು ಗಡಿ ನಿಯಂತ್ರಣ ರೇಖೆ(ಎಲ್ ಎಸಿ)ಯವರೆಗೆ ಭಾರತಕ್ಕೆ ಸವಾಲುಗಳು ಎದುರಾದ ಸಮಯಗಳಲ್ಲಿ ನಮ್ಮ ಸೈನಿಕರು ಅವರಿಗೆ ಅರ್ಥವಾಗುವ ಭಾಷೆಯಲ್ಲಿ ತಕ್ಕ ಪ್ರತ್ಯುತ್ತರ ನೀಡಿದ್ದಾರೆ ಎಂದು ಪ್ರಧಾನಿ ತಮ್ಮ ಭಾಷಣದಲ್ಲಿ ಪರೋಕ್ಷವಾಗಿ ಪಾಕಿಸ್ತಾನ ಮತ್ತು ಚೀನಾ ದೇಶಗಳಿಗೆ ಬಲವಾದ ಸಂದೇಶ ನೀಡಿದ್ದಾರೆ.

ಕಳೆದ ಜೂನ್ ನಲ್ಲಿ ಪೂರ್ವ ಲಡಾಕ್ ನಲ್ಲಿ ನಡೆದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾದ ಬಗ್ಗೆ ಪ್ರಸ್ತಾಪಿಸಿದ ಮೋದಿ, ನಮ್ಮ ದೇಶ, ನಮ್ಮ ಜವಾನರು ಏನು ಮಾಡಬಹುದು ಎಂಬುದನ್ನು ಇಡೀ ವಿಶ್ವ ಲಡಾಕ್ ನಲ್ಲಿ ನೋಡಿದೆ. ಇಂದು ಆ ಎಲ್ಲಾ ಧೈರ್ಯಶಾಲಿ, ಶಕ್ತಿಶಾಲಿ ಯೋಧರಿಗೆ ಕೆಂಪು ಕೋಟೆಯಲ್ಲಿ ನಿಂತು ಕೈ ಮುಗಿಯುತ್ತೇನೆ, ಭಯೋತ್ಪಾದನೆ ಅಥವಾ ವಿಸ್ತರಣೆ ಯಾವ ವಿಷಯಗಳು ಬಂದರೂ ಕೂಡ ಭಾರತ ಅವುಗಳ ವಿರುದ್ಧ ಸಮರ್ಥವಾಗಿ ಹೋರಾಡುತ್ತದೆ ಎಂದರು.

ನೆರೆ ದೇಶದವರು ಎಂದರೆ ನಮ್ಮ ಗಡಿಭಾಗವನ್ನು ಭೌಗೋಳಿಕವಾಗಿ ಹಂಚಿಕೊಳ್ಳುವುದು ಮಾತ್ರವಲ್ಲ, ಅವರೊಂದಿಗೆ ನಾವು ಭಾವನಾತ್ಮಕ ಮೌಲ್ಯಗಳನ್ನು ಕೂಡ ಹಂಚಿಕೊಳ್ಳುತ್ತೇವೆ. ನಮ್ಮ ನೆರೆಯ ದೇಶಗಳೊಂದಿಗೆ ನಾವು ಬಾಂಧವ್ಯವನ್ನು ಹೊಂದಿದ್ದೇವೆ. ಪರಸ್ಪರ ಗೌರವಿಸುವುದು, ಒಟ್ಟಾಗಿ ಕೆಲಸ ಮಾಡುವುದು ಆಗಬೇಕಾಗಿದೆ ಎಂದರು. 

ಭಾರತ ಚೀನಾ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಭೂತಾನ್, ಮ್ಯಾನ್ಮಾರ್ ಮತ್ತು ಆಫ್ಘಾನಿಸ್ತಾನ ಜೊತೆಗೆ ಗಡಿ ಹಂಚಿಕೊಂಡಿದೆ. 

ಇಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ರಹಿತ ಸ್ಥಾನ ಪಡೆಯಲು ಭಾರತಕ್ಕೆ 192 ದೇಶಗಳ ಪೈಕಿ 184 ದೇಶಗಳು ಮತ ಹಾಕಿವೆ ಎಂದಾದರೆ ನಮಗೆ ಎಷ್ಟು ಬೆಂಬಲವಿದೆ ಎಂದು ಯೋಚಿಸಬಹುದು, ಭಯೋತ್ಪಾದನೆ, ಸಂಘರ್ಷದ ವಿರುದ್ಧದ ಹೋರಾಟಕ್ಕೆ ಭಾರತದ ಪರವಾಗಿ ಇಡೀ ವಿಶ್ವವೇ ಇದೆ ಎಂದು ಆತ್ಮವಿಶ್ವಾಸದಿಂದ ಪ್ರಧಾನಿ ಹೇಳಿದರು.

ಹಳದಿ ಮಿಶ್ರಿತ ಬಿಳಿ ಬಣ್ಣದ ಶರ್ಟ್, ಬಿಳಿ ಮತ್ತು ಕೇಸರಿ ಬಣ್ಣದ ಶಾಲು ಹಾಗೂ ಕೇಸರಿ ಮಿಶ್ರಿತ ರುಮಾಲು ಧರಿಸಿದ್ದ ಪ್ರಧಾನಿ ಈ ವರ್ಷ ಸತತ ಏಳನೇ ಬಾರಿಗೆ ದೆಹಲಿಯ ಕೆಂಪು ಕೋಟೆಯಿಂದ ಐತಿಹಾಸಿಕ ಭಾಷಣ ಮಾಡಿದರು.

ತಮ್ಮ 26 ನಿಮಿಷಗಳ ಭಾಷಣದಲ್ಲಿ ಮೋದಿ ಇಂದು ಆತ್ಮ ನಿರ್ಭರ ಭಾರತ್, ಸ್ಥಳೀಯತೆಗೆ ಆದ್ಯತೆ, ಮೇಕ್ ಇನ್ ಇಂಡಿಯಾದಿಂದ ಹಿಡಿದು ಮೇಡ್ ಫಾರ್ ವರ್ಲ್ಡ್ ವರೆಗೆ ಮಾತನಾಡಿದರು. ಕೊರೋನಾ ವಿರುದ್ಧದ ಹೋರಾಟದಲ್ಲಿ ಮೃತಪಟ್ಟ ಮುಂಚೂಣಿ ಆರೋಗ್ಯ ಕಾರ್ಯಕರ್ತರು, ವೈದ್ಯರಿಗೆ ಗೌರವ ಸಲ್ಲಿಸಿದರು. 

SCROLL FOR NEXT