ದೇಶ

ಗಡಿ ವಿಚಾರವಾಗಿ ಚೀನಾ ಹೆಸರು ಹೇಳಲು ಸರ್ಕಾರಕ್ಕೆ ಭಯವೇಕೆ: ಕಾಂಗ್ರೆಸ್‌

Srinivasamurthy VN

ನವದೆಹಲಿ: 74ನೇ ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಪ್ರಧಾನಿ ಮೋದಿ ಮಾಡಿದ್ದ ಭಾಷಣದ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್, ಅಧಿಕಾರದಲ್ಲಿ ಕುಳಿತವರಿಗೆ ಚೀನಾ ಹೆಸರು ಹೇಳಲು ಭಯವೇಕೆ ಎಂದು ಟೀಕಿಸಿದೆ.

ಪ್ರಧಾನಿ ನರೇಂದ್ರ ಮೋದಿಯವರ ಭಾಷಣದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ, 'ಭಾರತದ ಭೂಪ್ರದೇಶಕ್ಕೆ ಅತಿಕ್ರಮ ಪ್ರವೇಶ ಮಾಡಿದ ಚೀನಾ ಹೆಸರು ಹೇಳಲು ಅಧಿಕಾರದಲ್ಲಿ ಕುಳಿತವರು ಏಕೆ ಹೆದರುತಿದ್ದಾರೆ. ಭಾರತದ ಸಾರ್ವಭೌಮತ್ವದ ಮೇಲೆ ಕಣ್ಣು ಹಾಕಿದವರಿಗೆ ಗಡಿ ಭಾರತೀಯ ಸೈನಿಕರು ಗಡಿ ನಿಯಂತ್ರಣಾ ರೇಖೆಯಿಂದ ಹಿಡಿದು, ವಾಸ್ತವ ಗಡಿ ನಿಯಂತ್ರಣಾ ರೇಖೆಯ ವರೆಗೆ ತಕ್ಕ ಉತ್ತರ ನೀಡಿದ್ದಾರೆ ಎಂದು ಪ್ರಧಾನಿ ಮೋದಿ ಹೇಳಿದರು. ಆದರೆ, ಚೀನಾದ ಹೆಸರನ್ನೇ ಉಲ್ಲೇಖಿಸಲಿಲ್ಲ. ದೇಶದ ಸಾರ್ವಭೌಮತ್ವವನ್ನು ಕಾಪಾಡುವಲ್ಲಿ ಇಡೀ ದೇಶವೇ ಒಗ್ಗಟ್ಟಾಗಿದೆ. ಭಾರತೀಯ ಸಶಸ್ತ್ರ ಪಡೆಗಳ ಬಗ್ಗೆ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತ ಮತ್ತು ಪ್ರತಿಯೊಬ್ಬ ಭಾರತೀಯನೂ ಹೆಮ್ಮೆ ಪಡುತ್ತಾನೆ ಎಂದು ಹೇಳಿದ್ದಾರೆ.

ಅಂತೆಯೇ 'ದೇಶವನ್ನು ರಕ್ಷಿಸಲು ಮತ್ತು ಚೀನಾವನ್ನು ಹಿಂದಕ್ಕೆ ತಳ್ಳಲು ಸರ್ಕಾರ ಏನು ಮಾಡುತ್ತಿದೆ ಎಂದು ಪ್ರತಿಯೊಬ್ಬ ಭಾರತೀಯರು ಈ ಸ್ವಾತಂತ್ರ್ಯ ದಿನಾಚರಣೆ ದಿನ ಸರ್ಕಾರವನ್ನು ಕೇಳಬೇಕಿದೆ. ನಮ್ಮ ಸರ್ಕಾರಕ್ಕೆ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದೆಯೇ, ಜನರ ಆದೇಶದ ಮೇಲೆ ಸರ್ಕಾರಕ್ಕೆ ವಿಶ್ವಾಸವಿದೆಯೇ?, ದೇಶದಲ್ಲಿ ಮುಕ್ತವಾಗಿ ಮಾತನಾಡುವ ಸ್ವಾತಂತ್ರ್ಯವಿದೆಯೇ? ಎಂದು ಪ್ರಶ್ನಿಸುವುದೂ ಈ ಸಂದರ್ಭದಲ್ಲಿ ಮುಖ್ಯವಾಗಿದೆ. ಭಾರತೀಯ ಸಶಸ್ತ್ರ ಪಡೆಗಳ ಬಗ್ಗೆ ಪ್ರತಿಯೊಬ್ಬ ಕಾಂಗ್ರೆಸ್ ಕಾರ್ಯಕರ್ತ ಮತ್ತು ದೇಶದ 130 ಕೋಟಿ ಜನ ಹೆಮ್ಮೆ ಪಡುತ್ತಾರೆ ಎಂದು ಸುರ್ಜೇವಾಲಾ  ಹೇಳಿದ್ದಾರೆ.

SCROLL FOR NEXT