ದೇಶ

ವೈದ್ಯರಿಗೆ ಅವಮಾನಿಸಿಲ್ಲ, ನನ್ನ ಹೇಳಿಕೆ ವಿಶ್ವ ಆರೋಗ್ಯ ಸಂಸ್ಥೆ ಕುರಿತಂತಾಗಿತ್ತು: ಸಂಜಯ್ ರಾವತ್

Manjula VN

ಮುಂಬೈ; ನಾನಾಗಲೀ ಯಾರೇ ಆಗಲೀ ವೈದ್ಯರು ಹಾಗೂ ವೈದ್ಯಕೀಯ ವಲಯದಲ್ಲಿ ಕಾರ್ಯನಿರ್ವಹಿಸುತ್ತಿರುವವರನ್ನು ಅವಮಾನಿಸಲು ಸಾಧ್ಯವಿಲ್ಲ. ಪ್ರಮುಖವಾಗಿ ಕೊರೋನಾ ಸಾಂಕ್ರಾಮಿಕ ಸಮಯದಲ್ಲಿ ದೇಶಕ್ಕೆ ಅವರು ನೀಡುತ್ತಿರುವ ಕೊಡುಗೆ ಬಳಿಕವಂತೂ ಅದು ಸಾಧ್ಯವಿಲ್ಲ ಎಂದು ಶಿವಸೇನೆ ಮುಖಂಡ ಸಂಜಯ್ ರಾವತ್ ಅವರು ಮಂಗಳವಾರ ಹೇಳಿದ್ದಾರೆ. 
    
ಸಾಂಕ್ರಾಮಿಕ ಸಂದರ್ಭದಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ ಪಾತ್ರದ ಕುರಿತು ನಾನು ಹೇಳಿಕೆ ನೀಡಿದ್ದೇ ವಿನಃ ನನ್ನ ಹೇಳಿಕೆ ವೈದ್ಯರನ್ನು ಅವಮಾನಿಸುವ ಉದ್ದೇಶವಾಗಿರಲಿಲ್ಲ. ಅನಗತ್ಯವಾಗಿ ನನ್ನ ಹೇಳಿಕೆಯನ್ನು ರಾಜಕಾರಣ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. 

ನನ್ನ ಹೇಳಿಕೆ ಕುರಿತು ಕೆಲವರು ರಾಜಕೀಯ ಮಾಡಲು ಯತ್ನಿಸುತ್ತಿದ್ದಾರೆ. ನಾನು ಯಾರಿಗೂ ಅವಮಾನಿಸಿಲ್ಲ. ಪ್ರಮುಖವಾಗಿ ವೈದ್ಯರಿಗಂತೂ ನಾನು ಅವಮಾನಿಸಿಲ್ಲ. ಕೊರೋನಾ ಸಾಂಕ್ರಾಮಿಕದಂತಹ ಸಮಯದಲ್ಲಿ ವೈದ್ಯರು, ನರ್ಸ್ ಗಳು ಹಾಗೂ ವೈದ್ಯಕೀ ಸಿಬ್ಬಂದಿಗಳ ಕೊಡುಗೆ ಅಪಾರವಾದದ್ದು. ವಿಶ್ವ ಆರೋಗ್ಯ ಸಂಸ್ಥೆ ಸೂಕ್ತ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದೇ ಆಗಿದ್ದರೆ, ಇಂದು ಇಡೀ ವಿಶ್ವ ಕೊರೋನಾದಿಂದ ಬಳಲುವಂತಹ ಪರಿಸ್ಥಿತಿ ಎದುರಾಗುತ್ತಿರಲಿಲ್ಲ ಎಂಬ ಅರ್ಥದಲ್ಲಿ ನಾನು ಹೇಳಿಕೆ ನೀಡಿದೆ. 

ಮಹಾರಾಷ್ಟ್ರದ ಸುದ್ದಿ ವಾಹಿನಿಯೊಂದಿಗೆ ಮಾತನಾಡಿದ್ದ ರಾವತ್ ಅವರು, ವೈದ್ಯರಿಗೆ ಏನೂ ಗೊತ್ತಿಲ್ಲ. ಅವರಿಗಿಂತಲೂ ಕಾಂಪೌಂಡರ್ ಎಷ್ಟು ಉತ್ತಮ. ನಾನು ಯಾವಾಗಲೂ ಕಾಂಪೌಂಡರ್ ನಿಂದಲೇ ಔಷಧಿಗಳನ್ನು ತರಿಸಿಕೊಳ್ಳುತ್ತೇನೆ. ವೈದ್ಯರಿಂದ ಎಂದಿಗೂ ಔಷಧಿ ಪಡೆದಿಲ್ಲ. ವಿಶ್ವ ಆರೋಗ್ಯ ಸಂಸ್ಥೆಯು ಕೆಲಸಕ್ಕೆಬಾರದ ಸಂಸ್ಥೆಯಾಗಿದೆ. ಡಬ್ಲ್ಯೂಹೆಚ್ಒ ನಿರ್ಲಕ್ಷ್ಯದಿಂದಾಗಿ ಇಂದು ನಾವು ಕೊರೋನಾ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ಹೇಳಿದ್ದರು. 

ಈ ಹೇಳಿಗೆ ಭಾರತೀಯ ವೈದ್ಯಕೀಯ ಮಂಡಳಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ರಾಜ್ಯಸಭಾ ಸಂಸದರಾಗಿರುವ ಸಂಜಯ್ ರಾವತ್ ಅವರ ಹೇಳಿಕೆ ಸಂಬಂಧ ಉಪ ರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಟು ಅವರಿಗೆ ಪತ್ರ ಬರೆದು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಅಲ್ಲದೆ, ಥಾಣೆಯ ವಿಭಾಗ ಭಾರತೀಯ ವೈದ್ಯಕೀಯ ಮಂಡಳಿ ಕೂಡ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಪತ್ರ ಬರೆದು ಕೂಡಲೇ ರಾವತ್ ರಾಜೀನಾಮೆ ಕೇಳುವಂತೆ ಆಗ್ರಹಿಸಿತ್ತು. ಈ ಎಲ್ಲಾ ಬೆಳವಣಿಗೆ ಹಿನ್ನೆಲೆಯಲ್ಲಿ ಇದೀಗ ರಾವತ್ ಅವರು ತಮ್ಮ ಹೇಳಿಕೆ ಕುರಿತು ಸ್ಪಷ್ಟನೆ ನೀಡಿದ್ದಾರೆ. 

SCROLL FOR NEXT