ನವದೆಹಲಿ: ಮುಂದಿನ ಚಳಿಗಾಲದಲ್ಲಿ ಸೇನಾ ನಿಲುಗಡೆಯನ್ನು ಪೂರ್ವ ಲಡಾಕ್ ನ ಗಡಿಯುದ್ದಕ್ಕೂ ವಿಸ್ತರಿಸಲು ಸಿದ್ಧತೆಯನ್ನು ಚೀನಾ ನಡೆಸುತ್ತಿರುವಾಗ ಭಾರತ ಕೂಡ ಭದ್ರತೆ ದೃಷ್ಟಿಯಿಂದ ಸೇನಾ ನಿಯೋಜನೆ ಮತ್ತು ಅಗತ್ಯ ಸೌಕರ್ಯಗಳನ್ನು ಹೆಚ್ಚಿಸಲು ಮುಂದಾಗಿದೆ.
ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆಯುದ್ದಕ್ಕೂ ಸೇನೆ ನಿಯೋಜನೆಯನ್ನು ಹೆಚ್ಚಿಸಲಾಗಿದೆ, ಚೀನಾ ತನ್ನ ಕಡೆಯಿಂದ ಸೇನಾ ನಿಲುಗಡೆಯನ್ನು ಹೆಚ್ಚಿಸುತ್ತಿರುವುದು ನೋಡಿ ಈ ಸಿದ್ದತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮೂಲಗಳಿಂದ ಖಚಿತವಾಗಿ ತಿಳಿದುಬಂದಿದೆ.
ಚೀನಾದ ಕಡೆಯಿಂದ ಭವಿಷ್ಯದಲ್ಲಿ ಯಾವುದೇ ರೀತಿಯ ಆಕ್ರಮಣಶೀಲತೆ ಎದುರಾದರೂ ಅದನ್ನು ಸಮರ್ಥವಾಗಿ ಎದುರಿಸಲು ಭಾರತೀಯ ಸೇನೆ ಈ ಸಿದ್ದತೆ ಮಾಡಿಕೊಳ್ಳುತ್ತಿದೆ. ಈ ಮಧ್ಯೆ ಭಾರತ-ಚೀನಾ ಗಡಿ ವ್ಯವಹಾರಗಳ ಸಮಾಲೋಚನಾ ಮತ್ತು ಸಮನ್ವಯ ಕಾರ್ಯತಂತ್ರ ಸಭೆಯ ರಾಜತಾಂತ್ರಿಕ ಮಟ್ಟದ ಮಾತುಕತೆ ಈ ವಾರ ನಡೆಯುವ ಸಾಧ್ಯತೆಯಿದೆ. ನಿನ್ನೆ ಹಿರಿಯ ಮಿಲಿಟರಿ ಮತ್ತು ರಾಜಕೀಯ ನಾಯಕರ ಸಭೆ ನಡೆದಿದ್ದು ಈಗಿನ ಪರಿಸ್ಥಿತಿ ಮತ್ತು ಭವಿಷ್ಯದ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಯಿತು ಎಂದು ಮೂಲಗಳಿಂದ ತಿಳಿದುಬಂದಿದೆ.
ಮೇ ತಿಂಗಳಿನಿಂದ ಇಲ್ಲಿಯವರೆಗೆ ಭಾರತ ಮತ್ತು ಚೀನಾ ಕಡೆಯಿಂದ ಸುಮಾರು 4 ಸಾವಿರ ಸೇನಾಪಡೆಗಳನ್ನು ನಿಯೋಜಿಸಲಾಗಿತ್ತು. ಗಡಿ ವಾಸ್ತವ ರೇಖೆಯ 3 ಸಾವಿರದ 488 ಕಿಲೋ ಮೀಟರ್ ಉದ್ದಕ್ಕೂ ಭಾರತದ ಕಡೆಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ಸೇನೆಯನ್ನು ನಿಲುಗಡೆ ಮಾಡಲಾಗಿದೆ.