ದೇಶ

ಭಾರತ, ಚೀನಾ ನಡುವೆ ಗುರುವಾರ ಮತ್ತೊಂದು ಸುತ್ತಿನ ಸಭೆ

Nagaraja AB

ನವದೆಹಲಿ: ಪೂರ್ವ ಲಡಾಖ್ ನಲ್ಲಿನ ಗಡಿ ವಿವಾದ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಗುರುವಾರ ಭಾರತ ಮತ್ತು ಚೀನಾ ನಡುವಣ ಮತ್ತೊಂದು ಸುತ್ತಿನ ರಾಜತಾಂತ್ರಿಕ ಸಭೆ ನಡೆಯುವ ಸಾಧ್ಯತೆ ಇರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

ಗಡಿ ವ್ಯವಹಾರಗಳಲ್ಲಿ ಸಮನ್ವಯತೆ ಮತ್ತು ಸಮಾಲೋಚನೆಯ ಕಾರ್ಯವಿಧಾನದ ಚೌಕಟ್ಟಿನಡಿಯಲ್ಲಿ ಉಭಯ ರಾಷ್ಟ್ರಗಳು ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದು ಈ ಬೆಳವಣಿಗೆ ಬಗ್ಗೆ ಮಾಹಿತಿ ಹೊಂದಿರುವವರು ತಿಳಿಸಿದ್ದಾರೆ.

ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಜಂಟಿ ಕಾರ್ಯದರ್ಶಿ (ಪೂರ್ವ ಏಷ್ಯಾ) ನವೀನ್ ಶ್ರೀವಾಸ್ತವ ನೇತೃತ್ವದ ಭಾರತದ ನಿಯೋಗ ಚೀನಾ ನಿಯೋಗ ಜೊತೆಗೆ ಮಾತುಕತೆ ನಡೆಸುವ ಸಾಧ್ಯತೆಯಿದೆ ಎನ್ನಲಾಗಿದೆ.

ಜುಲೈ 24 ರಂದು ನಡೆದಿದ್ದ ಕಳೆದ ಸುತ್ತಿನ ಮಾತುಕತೆಯಲ್ಲಿ ಚೀನಾದ ಗಡಿ ಇಲಾಖೆ ಮಹಾನಿರ್ದೇಶಕ ಹಾಂಗ್ ಲಿಯಾಂಗ್ ಆ ರಾಷ್ಟ್ರದ  ನೇತೃತ್ವ ವಹಿಸಿದ್ದರು. ದ್ವಿಪಕ್ಷೀಯ ಒಪ್ಪಂದದಂತೆ ವಾಸ್ತವ ನಿಯಂತ್ರಣ ರೇಖೆ ಬಳಿ ಸೇನೆಯನ್ನು ಸಂಪೂರ್ಣವಾಗಿ ಹಿಂತೆಗೆದುಕೊಳ್ಳಲು ಉಭಯ ಕಡೆಯವರು ಒಪ್ಪಿರುವುದಾಗಿ ಸಭೆಯ ನಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆ ನೀಡಿತ್ತು.

ಆಗಸ್ಟ್ 2 ರಂದು ನಡೆದ ಕಮಾಂಡರ್ ಮಟ್ಟದ ಮಾತುಕತೆ ಸಂದರ್ಭದಲ್ಲೂ ಸೇನೆಗಳ ಹಿಂತೆಗೆದುಕೊಳ್ಳುವಿಕೆ ಬಗ್ಗೆ ಚರ್ಚೆ ನಡೆದಿತ್ತು. ಆದಾಗ್ಯೂ ಭಾರತದ ನಿರೀಕ್ಷೆಯಂತೆ ಪೂರ್ವ ಲಡಾಖ್ ನಲ್ಲಿನ ಸಂಘರ್ಷದ ಸ್ಥಳಗಳಿಂದ ಸೇನೆಯನ್ನು ಹಿಂತೆಗೆದುಕೊಂಡಿಲ್ಲ ಎಂಬುದು ಸೇನಾ ಮೂಲಗಳಿಂದ ತಿಳಿದುಬಂದಿದೆ.

SCROLL FOR NEXT