ದೇಶ

ಉತ್ತರಪ್ರದೇಶ: ಸಾಲ ವಸೂಲಿಗಾಗಿ ಹೈಜಾಕ್ ಮಾಡಲಾಗಿದ್ದ ಬಸ್ ಪತ್ತೆ, ಪ್ರಯಾಣಿಕರು ಸುರಕ್ಷಿತ

Manjula VN

ಲಖನೌ: ಸಾಲ ವಸೂಲಿಗಾಗಿ 34 ಪ್ರಯಾಣಿಕರು ಸಂಚರಿಸುತ್ತಿದ್ದ ಬಸ್ಸನ್ನೇ ಫೈನಾನ್ಸ್ ಒಂದರ ಸಿಬ್ಬಂದಿಗಳು ಹೈಜಾಕ್ ಮಾಡಿದ ಆಘಾತಕಾರಿ ಘಟನೆ ಉತ್ತರಪ್ರದೇಶದ ಆಗ್ರಾ ಬಳಿ ಮಂಗಳವಾರ ತಡರಾತ್ರಿ ನಡೆದಿದ್ದು, ಹೈಜಾಕ್ ಆಗಿದ್ದ ಬಸ್ ಮತ್ತು ಅದರಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿ ಪತ್ತೆಯಾಗುವುದರೊಂದಿಗೆ ಪ್ರಕರಣ ಸುಖಾಂತ್ಯವಾಗಿದೆ. 

ಮಧ್ಯಪ್ರದೇಶ ಮೂಲದ ವ್ಯಕ್ತಿಯೊಬ್ಬರು ಬಸ್ ಹೊಂದಿದ್ದು ಅದನ್ನು ಉತ್ತರಪ್ರದೇಶದಲ್ಲಿ ನೋಂದಾಯಿಸಿದ್ದಾರೆ, ಬಸ್'ಗೆ ಅವರ ಫೈನಾನ್ಸ್ ನಿಂದ ಸಾಲ ಪಡೆದಿದ್ದರು. ಆದರೆ, ಸಾಕಷ್ಟು ಪ್ರಮಾಣದ ಸಾಲ ಬಾಕಿ ಉಳಿದಿತ್ತು. 

ಈ ನಡುವೆ 34 ಪ್ರಯಾಣಿಕರೊಂದಿಗೆ ಬಸ್ ಮಂಗಳವಾರ ರಾತ್ರಿ ಹರಿಯಾಣದ ಗುರುಗ್ರಾಮದಿಂದ ಉತ್ತರಪ್ರದೇಶ ಮಾರ್ಗವಾಗಿ ಮಧ್ಯಪ್ರದೇಶದ ಪನ್ನಾಗೆ ಪ್ರಯಾಣ ಬೆಳೆಸಿತ್ತು. ರಾತ್ರಿ 10.30ರ ಸುಮಾರಿಗೆ ಆಗ್ರಾ ಸಮೀಪದ ಚೆಕ್ ಪೋಸ್ಟ್ ಬಳಿ ಕಾರಿನಲ್ಲಿ ಬಂದ ಸಾಲ ವಸೂಲಿ ಏಜೆಂಟರ ತಂಡ, ಬಸ್ಸನ್ನು ಅಡ್ಡಗಟ್ಟಿ ಚಾಲಕನಿಗೆ ಕೆಳಗೆ ಇಳಯುವಂತೆ ಹೇಳಿದ್ದಾರೆ. 

ಇದಕ್ಕೆ ಒಪ್ಪದ ಆತ ಬಸ್ಸನ್ನು ಮುಂದಕ್ಕೆ ಚಲಾಯಿಸಿಕೊಂಡು ಹೋಗಿದ್ದಾನೆ. ಈವೇಳೆ ವಸೂಲಿಗಾರರ ಗುಂಪು ಮತ್ತೆ ಬಸ್ಸಿನ ಮುಂದೆ ಬಂದು ಅಡ್ಡಗಟ್ಟಿ, ಚಾಲಕ ಮತ್ತು ನಿರ್ವಾಹಕನನ್ನುಬಲವಂತವಾಗಿ ಇಳಿಸಿ ತಮ್ಮ ಕಾರಿನಲ್ಲಿ ಹತ್ತಿಸಿಕೊಂಡು ಅವರನ್ನು ಸುರಕ್ಷಿತವಾಗಿ ರಾಷ್ಟ್ರೀಯ ಹೆದ್ದಾರಿಯೊಂದರ ಬಳಿ ಬಿಟ್ಟು ಹೋಗಿದೆ. 

ಮತ್ತೊಂದೆಡೆ ಬಸ್ಸಿಗೆ ಹತ್ತಿಕೊಂಡು ನಾಲ್ಕಾರು ಜನರ ಗುಂಪು, ನಿಮಗೆ ಯಾವುದೇ ತೊಂದರೆ ಮಾಡುವುದಿಲ್ಲ. ಕಿರುಚಬೇಡಿಎಂದು ಪ್ರಯಾಣಿಕರನ್ನು ಹೆದರಿಸಿ ನಿರ್ಜನ ಪ್ರದೇಶವೊಂದಕ್ಕೆ ಬಸ್ನ್ನು ಕೊಂಡೊಯ್ದಿದ್ದಾರೆ. 

ಇತ್ತ ಚಾಲಕ ಮತ್ತು ನಿರ್ವಾಹಕ ಸಮೀಪದ ಪೊಲೀಸ್ ಠಾಣೆಗೆ ಹೋಗಿ, ಮಾಹಿತಿ ನೀಡಿದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ. 

ಇಷ್ಟೆಲ್ಲಾ ರಾದ್ಧಾಂತವಾದ ಮೇಲೆ ಹಣ ಬಾಕಿ ಉಳಿಸಿಕೊಂಡ ಕಾರಣಕ್ಕಾಗಿ ಬಸ್'ನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಫೈನಾನ್ಸ್ ಕಂಪನಿ ಹೇಳಿಕೆ ನೀಡಿದೆ. ಈ ನಡುವೆ ಫೈನಾನ್ಸ್ ಕಂಪನಿ ವಿರುದ್ಧ ಪೊಲೀಸರು ಅಪಹರಣ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಮಂಗಳವಾರವಷ್ಟೇ ಬಸ್ ಮಾಲೀಕ ಮೃತಪಟ್ಟಿದ್ದು, ಆತನ ಪುತ್ರ ತಂದೆಯ ಕ್ರಿಯೆ ನಡೆಸುತ್ತಿದ್ದ ಎನ್ನಲಾಗಿದೆ. 

ಕೆಲ ವ್ಯಕ್ತಿಗಳು ಆಗ್ರಾದಿಂದ ಬಲವಂತದಿಂದ ಬಸ್ಸನ್ನು ವಶಕ್ಕೆ ಪಡೆದುಕೊಂಡಿದ್ದು, ಬಲ್ರಾಯ್ ಪೊಲೀಸ್ ಠಾಣ ಪ್ರದೇಶದಲ್ಲಿರುವ ಡಾಬಾದ ಹಿಂದೆ ಬಸ್ ಪತ್ತೆಯಾಗಿದೆ. ಪ್ರಕರಣ ಕುರಿತ ತನಿಖೆ ಪ್ರಗತಿಯಲ್ಲಿದ್ದು, ಆಗ್ರಾ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದೇವೆಂದು ಇಟಾವಾಹ್ ದ ಹಿರಿಯ ಪೊಲೀಸ್ ಅಧಇಕಾರಿ ಆಕಾಶ್ ತೋಮರ್ ಅವರು ಹೇಳಿದ್ದಾರೆ.

SCROLL FOR NEXT