ದೇಶ

ದೇಶದ ಅತೀ ದೊಡ್ಡ ನದಿ ಮೇಲಿನ ರೋಪ್ ವೇ ಅಸ್ಸಾಂನಲ್ಲಿ ಲೋಕಾರ್ಪಣೆ

Srinivasamurthy VN

ಗುವಾಹತಿ: ಭಾರತ ದೇಶದ ಅತೀ ದೊಡ್ಡ ನದಿ ಮೇಲಿನ ರೋಪ್ ವೇಯನ್ನು ಅಸ್ಸಾಂನಲ್ಲಿ ಇಂದು ಉದ್ಘಾಟನೆ ಮಾಡಲಾಯಿತು. 

ಅಸ್ಸಾಂನ ಲೋಕೋಪಯೋಗಿ ಸಚಿವ ಹಿಮಂತ್ ಬಿಸ್ವಾ ಶರ್ಮಾ ಅವರು ಬ್ರಹ್ಮಪುತ್ರ ನದಿ ಮೇಲೆ ನಿರ್ಮಾಣ ಮಾಡಲಾಗಿರುವ ರೋಪ್ ವೇಯನ್ನು ಇಂದು ಉದ್ಘಾಟನೆ ಮಾಡಿದರು. ಪ್ರವಾಸೋಧ್ಯಮ ಅಭಿವೃದ್ಧಿ ಯೋಜನೆಯಡಿಯಲ್ಲಿ ಬ್ರಹ್ಮಪುತ್ರ ನದಿಯ ದಡಗಳನ್ನು ಸುಂದರಗೊಳಿಸುವ ನಿಟ್ಟಿನಲ್ಲಿ ಕೈಗೊಂಡ  ಮಹತ್ವಾಕಾಂಕ್ಷಿ ಯೋಜನೆಯ ಭಾಗವಾಗಿರುವ ಈ ರೋಪ್​ ವೇಯ ಕಾಮಗಾರಿಯನ್ನು 2006 ರಲ್ಲಿ ಪ್ರಾರಂಭಿಸಲಾಗಿತ್ತು. 2019 ರ ಅಂತ್ಯಕ್ಕೆ ಇದು ಪೂರ್ಣಗೊಂಡಿತ್ತು. ಕೊರೋನಾ ಲಾಕ್ ಡೌನ್ ಹಿನ್ನಲೆಯಲ್ಲಿ ರೋಪ್ ವೇ ಉದ್ಘಾಟನೆ ವಿಳಂಬವಾಗಿತ್ತು. ಇದೀಗ ರೋಪ್ ವೇಯನ್ನು ಲೋಕಾರ್ಪಣೆ  ಮಾಡಲಾಗಿದೆ.

ಬ್ರಹ್ಮಪುತ್ರ ನದಿ ಮೇಲೆ ಸುಮಾರು 2 ಕಿ.ಮೀ ಉದ್ಧವಿರುವ ಈ ರೋಪ್ ವೇ ಪ್ರಸ್ತುತ ದೇಶದಲ್ಲಿರುವ ನದಿ ಮೇಲಿನ ಅತೀ ದೊಡ್ಡ ಅಥವಾ ಅತೀ ಉದ್ಧದ ರೋಪ್ ವೇ ಎಂಬ ಕೀರ್ತಿಗೆ ಭಾಜನವಾಗಿದೆ. ಇದನ್ನು ಬಳಸಿ ಸಾರ್ವಜನಿಕರು ಕೇವಲ ಏಳು ನಿಮಿಷಗಳಲ್ಲಿ ಆಚಿನ ದಡವನ್ನು ತಲುಪಬಹುದಾಗಿದೆ. ಪ್ರತಿ  ರೋಪ್​ ವೇ ಬೋಗಿ 32 ಪ್ರಯಾಣಿಕರನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಆದರೆ ಈಗ ಕೊರೋನಾ ಸೋಂಕಿನಿಂದಾಗಿ ಕೇವಲ 15 ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲು ಅಧಿಕಾರಿಗಳು ನಿರ್ಧರಿಸಿದ್ದಾರೆ.

ಪ್ರತಿಯೊಬ್ಬ ಪ್ರಯಾಣಿಕನೂ ಇದರಲ್ಲಿ ಓಡಾಡಲು ರಕ್ಷಣಾ ಸಾಧನ (safety gear) ಧರಿಸಬೇಕಾಗಿದೆ. ಸವಾರಿಯ ಒಂದು ಮಾರ್ಗಕ್ಕೆ 60 ರೂಪಾಯಿ ಮತ್ತು ದ್ವಿಮುಖ ಪ್ರಯಾಣಕ್ಕೆ 100 ರೂಪಾಯಿ ದರ ನಿಗದಿ ಮಾಡಲಾಗಿದೆ. ಜೊತೆಗೆ, ದೈನಂದಿನ, ಸಾಪ್ತಾಹಿಕ ಮತ್ತು ಮಾಸಿಕ ಪಾಸ್‌ಗಳನ್ನು ಸಹ  ಪಡೆಯಲು ಅವಕಾಶವಿದೆ. ರೋಪ್‌ವೇ ಬೆಳಗ್ಗೆ 8 ರಿಂದ ಸಂಜೆ 6 ರವರೆಗೆ ಕಾರ್ಯನಿರ್ವಹಿಸಲಿದ್ದು, ರೋಪ್‌ವೇ ಸೇವೆಯ ಮೇಲ್ವಿಚಾರಣೆಗಾಗಿ 58 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಒಟ್ಟಾರೆ, 56 ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಸಂಪೂರ್ಣ ಯೋಜನೆಯನ್ನು ನಿರ್ಮಿಸಲಾಗಿದೆ ಎಂದು  ಹೇಳಲಾಗಿದೆ.

SCROLL FOR NEXT