ದೇಶ

ತಮಿಳು ನಾಡು: ಆನ್ ಲೈನ್ ತರಗತಿಯ ಪಾಠ ಕೇಳಬೇಕೆಂದರೆ ಈ ವಿದ್ಯಾರ್ಥಿಗಳು ಪ್ರತಿನಿತ್ಯ ಬೆಟ್ಟ ಏರಿ ಹೋಗಬೇಕು!

Sumana Upadhyaya

 ತಿರುಚಿ: ಕೋವಿಡ್-19 ಹಿನ್ನೆಲೆಯಲ್ಲಿ ಶಾಲೆಗಳು ಆರಂಭವಾಗಿಲ್ಲದಿರುವುದರಿಂದ ಆನ್ ಲೈನ್ ನಲ್ಲಿ ತರಗತಿಗಳು ನಡೆಯುತ್ತಿವೆ. ನಗರ ಪ್ರದೇಶಗಳ ಮಕ್ಕಳಿಗೆ ಸಮಸ್ಯೆಯಾಗುವುದಿಲ್ಲ, ಆದರೆ ಹಳ್ಳಿಗಳಲ್ಲಿ ಮಕ್ಕಳಿಗೆ ಇಂಟರ್ನೆಟ್ ಸಂಪರ್ಕ ಸರಿಯಾಗಿಲ್ಲದಿರುವುದರಿಂದ ಆನ್ ಲೈನ್ ತರಗತಿಗಳಲ್ಲಿ ಭಾಗಿಯಾಗಲು ಕಷ್ಟವಾಗುತ್ತಿದೆ.

ತಮಿಳು ನಾಡಿನ ತಿರುಚಿಯ ಪಚಮಲೈ ಪರ್ವತ ಭಾಗದ ಮನಲೊಡೈ ಗ್ರಾಮದ ಮಕ್ಕಳು ಪ್ರತಿದಿನ 1 ಕಿಲೋ ಮೀಟರ್ ನಡೆದುಕೊಂಡು ಹೋಗಿ ಗುಹೆಯ ರೀತಿಯ ಸ್ಥಳದಲ್ಲಿ ಬೆಟ್ಟದ ತುದಿಯಲ್ಲಿ ಕುಳಿತು ಆನ್ ಲೈನ್ ಪಾಠ ಕೇಳಬೇಕಾದ ಅನಿವಾರ್ಯ ಪರಿಸ್ಥಿತಿಯಿದೆ. ಸುತ್ತಮುತ್ತಲ ಹಳ್ಳಿಗಳಲ್ಲಿ ಎಲ್ಲಿಯೂ ಇಂಟರ್ನೆಟ್ ಸಿಗುವುದಿಲ್ಲ. ಬೆಟ್ಟದ ತುದಿಗೆ ಹೋದರೆ ಮಾತ್ರ ಸಿಗ್ನಲ್ ಸಿಗುವುದರಿಂದ ಮಕ್ಕಳು ಪಠ್ಯಪುಸ್ತಕ, ನೋಟ್ ಪುಸ್ತಕ ಹಿಡಿದುಕೊಂಡು ಹೋಗಬೇಕಾಗುತ್ತದೆ.

ಆಗಸ್ಟ್ ಮೊದಲ ವಾರದಿಂದ ನಮ್ಮ ಶಿಕ್ಷಕರು ಆನ್ ಲೈನ್ ನಲ್ಲಿ ತರಗತಿ ಆರಂಭಿಸಿದ್ದಾರೆ. ಅವರು ರೆಕಾರ್ಡ್ ವಿಡಿಯೊಗಳನ್ನು ವಾಟ್ಸಾಪ್ ಗ್ರೂಪ್ ನಲ್ಲಿ ಕಳುಹಿಸುತ್ತಾರೆ. ಆ ವಿಡಿಯೊಗಳನ್ನು ನಾವು ಡೌನ್ ಲೋಡ್ ಮಾಡಿಕೊಂಡು ಪಾಠಗಳನ್ನು ಕೇಳಿಸಿಕೊಳ್ಳಬೇಕು ಎನ್ನುತ್ತಾರೆ 12ನೇ ತರಗತಿ ಜೀವಶಾಸ್ತ್ರ ವಿದ್ಯಾರ್ಥಿನಿ ಎಸ್ ದೀಪಿಕಾ.

ಈ ಬೆಟ್ಟದ ಗುಹೆಯಂತಹ ಪ್ರದೇಶದಲ್ಲಿ ಕೂಡ ಸಿಗ್ನಲ್ ಅಷ್ಟೊಂದು ಚೆನ್ನಾಗಿ ಸಿಗುವುದಿಲ್ಲವಂತೆ. ತುಂಬ ಹೊತ್ತು ಕಾದ ನಂತರ ಸಿಗುತ್ತದೆ. ವನ್ನಡು ಮತ್ತು ಕೊಂಬೈ ಗ್ರಾಮ ಪಂಚಾಯತ್ ಗಳಲ್ಲಿ 32 ಬುಡಕಟ್ಟು ಗ್ರಾಮಗಳಿವೆ. ಇಲ್ಲಿ 25 ಕಿಲೋ ಮೀಟರ್ ದೂರದಲ್ಲಿ ಶಾಲೆಗಳಲ್ಲಿ ಮಕ್ಕಳು ಕಲಿಯುತ್ತಾರೆ, ಹಲವರು ಹಾಸ್ಟೆಲ್ ಗಳಲ್ಲಿ ಉಳಿದುಕೊಂಡಿದ್ದಾರೆ.

ಸರ್ಕಾರಿ ಕಾಲೇಜುಗಳಲ್ಲಿ ವಾಟ್ಸಾಪ್ ಗ್ರೂಪ್ ನಲ್ಲಿ ವಿಡಿಯೊಗಳನ್ನು ಕಳುಹಿಸುತ್ತಿದ್ದರೆ ಖಾಸಗಿ ಶಾಲಾ, ಕಾಲೇಜುಗಳ ವಿದ್ಯಾರ್ಥಿಗಳಿಗೆ ಇನ್ನಷ್ಟು ಕಷ್ಟವಾಗುತ್ತದೆ, ಲೈವ್ ಕ್ಲಾಸ್ ಪ್ರತಿದಿನ ಮಾಡುವುದರಿಂದ ಈ ಬುಡಕಟ್ಟು ಮಕ್ಕಳಿಗೆ ತರಗತಿಗಳಿಗೆ ಹಾಜರಾಗುವುದು ಕಷ್ಟವಾಗುತ್ತದೆ ಎನ್ನುತ್ತಾರೆ ಎಸ್ ಸೂರ್ಯ ಎಂಬ ವಿದ್ಯಾರ್ಥಿ.

ಇಡೀ ಗ್ರಾಮಕ್ಕೆ ಒಂದೇ ಒಂದು ಬಿಎಸ್ ಎನ್ ಎಲ್ ಸಿಗ್ನಲ್ ಇದ್ದು, ಅದನ್ನೇ ನಂಬಿಕೊಂಡಿದ್ದೇವೆ. ವಿದ್ಯುತ್ ಇಲ್ಲದಿದ್ದರೆ ಅದು ಕೂಡ ಸಿಗುವುದಿಲ್ಲ. ಫೋನ್ ಕರೆ ಮಾಡಲು ಕೂಡ ಸಾಧ್ಯವಾಗುವುದಿಲ್ಲ ಎಂದು ಮತ್ತೊಬ್ಬ ವಿದ್ಯಾರ್ಥಿ ಹೇಳುತ್ತಾರೆ.

SCROLL FOR NEXT