ದೇಶ

ಕೋವಿಡ್-19 ಬಹುತೇಕ ಎಲ್ಲಾ ಅಂಗಗಳಿಗೂ ಮಾರಕ;  ಕೆಲವೊಮ್ಮೆ ಲಕ್ಷಣಗಳಿಗೂ ಶ್ವಾಸಕೋಶಕ್ಕೂ ಸಂಬಂಧವಿರುವುದಿಲ್ಲ: ತಜ್ಞರು

Srinivas Rao BV

ನವದೆಹಲಿ: ದಿನದಿಂದ ದಿನಕ್ಕೆ ಕೋವಿಡ್-19 ಸ್ವರೂಪ, ಅದರಿಂದ ಉಂಟಾಗುವ ಆರೋಗ್ಯದ ಸಮಸ್ಯೆಗಳು ಬದಲಾಗಿತ್ತಿದ್ದು, ತಜ್ಞರ ಲೆಕ್ಕಾಚಾರವನ್ನೂ ಮೀರಿ ಮಾರಣಾಂತಿಕ ಅಪಾಯಗಳನ್ನು ತಂದೊಡ್ಡುತ್ತಿದೆ. 

ಏಮ್ಸ್ ತಜ್ಞರ ಪ್ರಕಾರ ಕೋವಿಡ್-19 ಬಹುತೇಕ ಎಲ್ಲಾ ಅಂಗಾಂಗಗಳಿಗೂ ಸಹ ಮಾರಕವಾಗಿದೆ ಹಾಗೂ ಕೆಲವೊಂದು ಪ್ರಕರಣಗಳಲ್ಲಿ ರೋಗ ಲಕ್ಷಣಗಳಿಗೂ ಶ್ವಾಸಕೋಶಕ್ಕೂ ಸಂಬಂಧವೇ ಇರುವುದಿಲ್ಲ ಎಂಬ ಮಾಹಿತಿ ಬಹಿರಂಗವಾಗತೊಡಗಿದೆ. 

ಪ್ರಾರಂಭದಲ್ಲಿ ಇದನ್ನು ವೈರಲ್ ನ್ಯುಮೋನಿಯಾ ಎಂದು ಪರಿಗಣಿಸಲಾಗಿತ್ತು. ಆದರೆ ಬರುಬರುತ್ತಾ, ಇದರ ಸ್ವರೂಪ ವಿಸ್ತಾರಗೊಳ್ಳುತ್ತಿದ್ದು, ಎಲ್ಲಾ ಅಂಗಾಂಗಗಳಿಗೂ ಈ ರೋಗ ಮಾರಣಾಂತಿಕ ಅಪಾಯಗಳನ್ನು ತಂದೊಡ್ಡುವ ಸಾಮರ್ಥ್ಯ ಹೊಂದಿದೆ ಎನ್ನುತ್ತಿದ್ದಾರೆ  ಏಮ್ಸ್ ನಲ್ಲಿರುವ ತಜ್ಞರು. 

ಕಡಿಮೆ, ಸಾಧಾರಣ ಮತ್ತು ತೀವ್ರ ಎಂದು ಕೋವಿಡ್ ಪ್ರಕರಣಗಳನ್ನು ವಿಭಾಗಿಸಲಾಗಿದ್ದು, ಇದು ಕೇವಲ ಶ್ವಾಸಕೋಶಕ್ಕೆ ಸಂಬಂಧಿಸಿದ ಲಕ್ಷಣಗಳಿಂದ ಮಾಡಲಾಗಿದೆ. ಆದರೆ ಬೇರೆ ಅಂಗಾಂಗಗಳ ಮೇಲಿನ ಪರಿಣಾಮವನ್ನು ಮರುಪರಿಶೀಲಿಸಬೇಕಿದೆ ಎನ್ನುತಿದೆ ತಜ್ಞರ ತಂಡ. 

ನೀತಿ ಆಯೋಗದ ಸಹಯೋಗದಲ್ಲಿ ಮೂಡಿಬರುತ್ತಿರುವ ನ್ಯಾಷನಲ್ ಕ್ಲಿನಿಕಲ್ ಗ್ರಾಂಡ್ ರೌಂಡ್ಸ್ ನಲ್ಲಿ ಏಮ್ಸ್ ನ ನಿರ್ದೇಶಕ ಡಾ.ರಣ್ದೀಪ್ ಗುಲೇರಿಯಾ, ನ್ಯೂರಾಲಜಿ ವಿಭಾಗದ ಮುಖ್ಯಸ್ಥರಾದ ಡಾ. ಎಂವಿ ಪದ್ಮ ಶ್ರೀವಾಸ್ತವ, ಹೃದಯ ಸಂಬಂಧಿ ಪ್ರೊಫೆಸರ್ ಡಾ. ಅಂಬುಜ್ ರಾಯ್, ಡಿಪಾರ್ಟ್ಮೆಂಟ್ ಆಫ್ ಮೆಡಿಸಿನ್ ನ ಅಸೋಸಿಯೇಟ್ ಪ್ರೊಫೆಸರ್ ಡಾ.ನೀರಜ್ ನಿಶ್ಚಲ್ ಕೋವಿಡ್-19 ನಿಂದ ಉಂಟಾಗುತ್ತಿರುವ ಶ್ವಾಸಕೋಶದ ಜೊತೆಗಿನ ಬೇರೆ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಸಿದ್ದಾರೆ. 

ಕೋವಿಡ್-19 ಬಂದು 8 ತಿಂಗಳಾಗಿದ್ದು, ಕಾಲಕ್ಕೆ ತಕ್ಕಂತೆ ಬೇರೆ ಬೇರೆ ಕಾರ್ಯತಂತ್ರಗಳ ಬಗ್ಗೆ ಸಾಕಷ್ಟು ಕಲಿಯಲಾಗಿದೆ. ಈ ಹಿಂದೆ ಕೋವಿಡ್-19 ನ್ನು ಕೇವಲ ವೈರಲ್ ನ್ಯುಮೋನಿಯಾ ಎಂದುಕೊಳ್ಳಲಾಗಿತ್ತು. ಆದರೆ ಈಗ ಅದು ಶ್ವಾಸಕೋಶವನ್ನೂ ಮೀರಿ ಬೇರೆ ಬೇರೆ ರೀತಿಯಲ್ಲಿ ಪರಿಣಾಮ ಬೀರುತ್ತಿದೆ.  ACE2 ರಿಸೆಪ್ಟರ್ಸ್ ಮೂಲಕ ಜೀವಕೋಶಗಳಿಗೆ ಪ್ರವೇಶ ಪಡೆದುಕೊಳ್ಳುತ್ತವೆ, ಈ ರೀತಿ ಶ್ವಾಸಕೋಶ ಮಾತ್ರವಲ್ಲದೇ ಬೇರೆ ಅಂಗಾಂಗಗಳಿಗೂ ಸೇರ್ಪಡೆಯಾಗುತ್ತವೆ. ಇದರಿಂದಾಗಿ ಕೋವಿಡ್-19 ಪೀಡಿತರು ರೋಗ ಲಕ್ಷಣ ರಹಿತರಾಗಿದ್ದರೂ ಪಾರ್ಶ್ವವಾಯು ಹಾಗೂ ಹೃದಯ ನಾಳಗಳಲ್ಲಿ ಬ್ಲಾಕ್ ಉಂಟಾಗಿ ಮಾರಣಾಂತಿಕ ಅಪಾಯಗಳನ್ನು ಎದುರಿಸಬಹುದು ಎಂದು ತಜ್ಞರು ಎಚ್ಚರಿಸಿದ್ದು ಈ ಸಂಬಂಧ ಮತ್ತಷ್ಟು ಹೆಚ್ಚಿನ ಸಂಶೋಧನೆ ನಡೆಯಬೇಕಿದೆ ಎನ್ನುತ್ತಿದ್ದಾರೆ. 
 

SCROLL FOR NEXT