ದೇಶ

ಕೊರೋನಾ ವೈರಸ್: ಅತೀ ಹೆಚ್ಚು ಸೋಂಕಿತರ ಪಟ್ಟಿಯಲ್ಲಿ ತಮಿಳುನಾಡು ಹಿಂದಿಕ್ಕಿ ಎರಡನೇ ಸ್ಥಾನಕ್ಕೇರಿದ ಆಂಧ್ರ ಪ್ರದೇಶ

Srinivasamurthy VN

ಅಮರಾವತಿ: ನೆರೆಯ ಆಂಧ್ರ ಪ್ರದೇಶದಲ್ಲಿ ಮಾರಕ ಕೊರೋನಾ ವೈರಸ್ ಆರ್ಭಟ ಮತ್ತಷ್ಟು ಜೋರಾಗಿದ್ದು, ಇದೀಗ ಕೊರೋನಾ ವೈರಸ್ ಅತೀ ಹೆಚ್ಚು ಸೋಂಕಿತರು ದಾಖಲಾಗಿರುವ ರಾಜ್ಯಗಳ ಪಟ್ಟಿಯಲ್ಲಿ ಆಂಧ್ರ ಪ್ರದೇಶ 2ನೇ ಸ್ಥಾನಕ್ಕೇರಿದೆ.

ಆಂಧ್ರ ಪ್ರದೇಶದಲ್ಲಿ ಸತತ ಐದನೇ ದಿನವೂ ಹೊಸ ಸೋಂಕಿತರ ಸಂಖ್ಯೆ 10 ಸಾವಿರ ಗಡಿ ದಾಟಿದ್ದು, ನಿನ್ನೆ ಒಂದೇ ದಿನ 10,603 ಸೋಂಕು ಪ್ರಕರಣಗಳು ದಾಖಲಾಗಿವೆ. ಆ ಮೂಲಕ ಆಂಧ್ರ ಪ್ರದೇಶದ ಒಟ್ಟಾರೆ ಸೋಂಕಿತರ ಸಂಖ್ಯೆ 4,24,767ಕ್ಕೆ ಏರಿಕೆಯಾಗಿದ್ದು, ಈ ಪೈಕಿ 3,21,754 ಮಂದಿ ಗುಣಮುಖರಾಗಿ  ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಅಂತೆಯೇ 99,129 ಮಂದಿ ಸೋಂಕಿತರು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ನಿನ್ನೆ ಒಂದೇ ದಿನ 88 ಮಂದಿ ಸೋಂಕಿತರು ಸಾವನ್ನಪ್ಪುವ ಮೂಲಕ ಆಂಧ್ರ ಪ್ರದೇಶದಲ್ಲಿ ಕೋವಿಡ್-19 ಸಾವಿನ ಸಂಖ್ಯೆ 3,884ಕ್ಕೆ ಏರಿಕೆಯಾಗಿದೆ.

ಇನ್ನು ದೇಶದಲ್ಲಿ ಅತೀ ಹೆಚ್ಚು ಸೋಂಕಿತರನ್ನು ಹೊಂದಿರುವ ರಾಜ್ಯಗಳ ಪಟ್ಟಿಯಲ್ಲಿ ಇದೀಗ ಆಂಧ್ರ ಪ್ರದೇಶ 2ನೇ ಸ್ಥಾನಕ್ಕೇರಿದ್ದು, 2ನೇ ಸ್ಖಾನದಲ್ಲಿದ್ದ ತಮಿಳುನಾಡು ಮೂರನೇ ಸ್ಥಾನಕ್ಕೆ ಕುಸಿದಿದೆ. ತಮಿಳುನಾಡಿನಲ್ಲಿ ಪ್ರಸ್ತುತ 4.22ಲಕ್ಷ ಒಟ್ಟಾರೆ ಸೋಂಕಿತರಿದ್ದು, ಇದೀಗ ಆಂಧ್ರ ಪ್ರದೇಶ4,24 ಲಕ್ಷ ಸೋಂಕಿತರನ್ನು  ಹೊಂದುವ ಮೂಲಕ 2ನೇ ಸ್ಥಾನಕ್ಕೆ ಜಿಗಿದಿದೆ. ಇನ್ನು ಮೊದಲ ಸ್ಥಾನದಲ್ಲಿ ಮಹಾರಾಷ್ಟ್ರ ಮುಂದುವರೆದಿದ್ದು, ಇಲ್ಲಿ ಈ ವರೆಗೂ ಒಟ್ಟಾರೆ ಸೋಂಕಿತರ ಸಂಖ್ಯೆ 7, 80, 689ಕ್ಕೆ ಏರಿಕೆಯಾಗಿದೆ. ನಿನ್ನೆ ಒಂದೇ ದಿನ ಮಹಾರಾಷ್ಟ್ರದಲ್ಲಿ 16,408 ಹೊಸ ಸೋಂಕು ಪ್ರಕರಣಗಳು ಪತ್ತೆಯಾಗಿದೆ. ಅಂತೆಯೇ 7,690 ಮಂದಿ  ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಒಟ್ಟಾರೆ 5,62,401 ಮಂದಿ ಸೋಂಕಿತರು ಗುಣಮುಖರಾಗಿದ್ದಾರೆ. ನಿನ್ನೆ 296 ಮಂದಿ ಸೋಂಕಿತರು ಸಾವನ್ನಪ್ಪಿದ್ದು, ಆ ಮೂಲಕ ಕೋವಿಡ್ ಸಾವಿನ ಸಂಖ್ಯೆ 24,399ಕ್ಕೆ ಏರಿಕೆಯಾಗಿದೆ.

ಸೋಮವಾರ ಒಂದೇ ದಿನ ದೇಶದಲ್ಲಿ ಬರೋಬ್ಬರಿ 78,512 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ. ಇಂದು 78,512 ಮಂದಿಗೆ ಹೊಸದಾಗಿ ಸೋಂಕು ಕಾಣಿಸಿಕೊಂಡಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 36,21,246ಕ್ಕೆ ಹೆಚ್ಚಳವಾಗಿದೆ. ಇದೇ ವೇಳೆ ಒಂದೇ ದಿನ 971 ಮಂದಿ ಸೋಂಕಿನಿಂದಾಗಿ ಸಾವಿಗೀಡಾಗಿದ್ದಾರೆ.  ಮೃತರ ಸಂಖ್ಯೆ 64,469ಕ್ಕೆ ಹೆಚ್ಚಳವಾಗಿದೆ. ಇನ್ನು 36,21,246 ಮಂದಿ ಸೋಂಕಿತರ ಪೈಕಿ 27,74,802 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ದೇಶದಲ್ಲಿ ಇನ್ನೂ 7,81,975 ಸಕ್ರಿಯ ಪ್ರಕರಣಗಳು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

SCROLL FOR NEXT