ದೇಶ

ಪಾಕ್ ಆಯ್ತು, ಈಗ ಚೀನಾದಿಂದಲೂ ಮತ್ತೆ ಗಡಿ ತಂಟೆ, ಎಲ್ಎಸಿ ಒಪ್ಪಂದ ಉಲ್ಲಂಘಿಸಿ ಭಾರತದ ಗಡಿ ಅತಿಕ್ರಮಣ, ಹಿಮ್ಮೆಟ್ಟಿಸಿದ ಸೈನಿಕರು!

Srinivasamurthy VN

ನವದೆಹಲಿ: ಲಡಾಖ್ ನಲ್ಲಿ ಚೀನಾ ಯೋಧರ ಪುಂಡಾಟ ಮುಂದುವರೆದಿದ್ದು, ಉಭಯ ದೇಶಗಳ ಸೇನಾ ಅಧಿಕಾರಿಗಳ ಸಭೆ ಬಳಿಕ ಸೇನೆಯನ್ನು ಹಿಂದಕ್ಕೆ ಕರೆಸಿಕೊಂಡಿದ್ದ ಚೀನಾ ಇದೀಗ ಮತ್ತೆ ಎಲ್ಎಸಿಯಲ್ಲಿ ಅತಿಕ್ರಮಣಕ್ಕೆ ಪ್ರಯತ್ನಿಸಿದೆ.

ಲಡಾಖ್​ನ ಗಾಲ್ವನ್ ಕಣಿವೆಯಲ್ಲಿ ಭಾರತದ ಭಾಗವನ್ನು ಅತಿಕ್ರಮಿಸಿ ಭಾರತೀಯ ಸೈನಿಕರ ಮೇಲೆಯೇ ಅಮಾನುಷ ಹಲ್ಲೆ ಎಸಗಿದ ಘಟನೆ ನಡೆದು ಎರಡು ತಿಂಗಳೂ ಕಳೆದಿಲ್ಲ ಅದಾಗಲೇ ಚೀನಾ ಮತ್ತೆ ಅತಿಕ್ರಮಣಕ್ಕೆ ಪ್ರಯತ್ನಿಸಿರುವ ವಿಚಾರ ಬೆಳಕಿಗೆ ಬಂದಿದೆ. ಈ ಬಗ್ಗೆ ಸ್ವತಃ ಭಾರತೀಯ ಸೇನಾಧಿಕಾರಿಗಳು  ಮಾಹಿತಿ ನೀಡಿದ್ದು, ಆಗಸ್ಟ್ 29-30ರ ದಿನದಂದು, ಅಂದರೆ ಶುಕ್ರವಾರ ರಾತ್ರಿ ಪಾಂಗೋಂಗ್ ಟ್ಸೋ ಸರೋವರದ ದಕ್ಷಿಣ ಭಾಗದಲ್ಲಿ ಚೀನಾದ ಪಿಎಲ್​ಎ ಸೈನಿಕರು ಅತಿಕ್ರಮಣಕ್ಕೆ ಮುಂದಾಗಿದ್ದರೆನ್ನಲಾಗಿದೆ. ಇದನ್ನು ಮೊದಲೇ ಊಹಿಸಿದ್ದ ಭಾರತದ ಭದ್ರತಾ ಪಡೆಗಳು ತತ್​ಕ್ಷಣವೇ ಜಾಗೃತಗೊಂಡು ಚೀನೀ  ಸೈನಿಕರನ್ನು ಹಿಮ್ಮೆಟ್ಟಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಮೂಲಕ ಗಾಲ್ವನ್ ಸಂಘರ್ಷದ ಬಳಿಕ ಎರಡೂ ಕಡೆಯವರು ಒಪ್ಪಿಕೊಂಡಿದ್ದ ಯಥಾಸ್ಥಿತಿಯನ್ನು ಚೀನಾ ಮುರಿದಿದೆ.  

“ಪ್ಯಾಂಗೋಂಗ್ ಟ್ಸೋ ಸರೋವರದ ಭಾಗದಲ್ಲಿ ಚೀನೀ ಸೈನಿಕರಿಂದ ಈ ಚಟುವಟಿಕೆ ನಡೆಯಬಹುದು ಎಂದು ಭಾರತದ ಪಡೆಗಳು ಮೊದಲೇ ಅಂದಾಜು ಮಾಡಿದ್ದವು. ಹಾಗಾಗಿ, ನಮ್ಮ ಸೇನಾ ನಿಯೋಜನೆ ಹೆಚ್ಚಿಸಿದೆವು. ವಿವಾದಿತ ಗಡಿ ಸಮೀಪ ನಿಯೋಜನೆಗೊಂಡಿದ್ದ ಸೈನಿಕರು ಗಡಿ ಯಥಾಸ್ಥಿತಿಯನ್ನು  ಮಾರ್ಪಾಡು ಮಾಡುವ ಚೀನಾ ದುರುದ್ದೇಶವನ್ನು ವಿಫಲಗೊಳಿಸಿದ್ದಾರೆ. ಮಾತುಕತೆ ಮೂಲಕ ಶಾಂತಿ ಕಾಪಾಡಲು ಭಾರತದ ಸೇನೆ ಬದ್ಧವಾಗಿದೆ. ಆದರೆ, ತನ್ನ ಭೂಪ್ರದೇಶದ ರಕ್ಷಣೆಗೂ ಅಷ್ಟೇ ಕಟಿಬದ್ಧವಾಗಿದೆ. ಚುಶುಲ್ ಪ್ರದೇಶದಲ್ಲಿ ಎರಡೂ ದೇಶಗಳ ಸೇನಾಪಡೆಗಳ ಬ್ರಿಗೇಡ್ ಕಮಾಂಡರ್ ಮಟ್ಟದಲ್ಲಿ ಫ್ಲಾಗ್  ಮೀಟಿಂಗ್ ನಡೆಯುತ್ತಿದ್ದು, ಇದರಲ್ಲಿ ಈ ವಿಚಾರಗಳನ್ನ ಚರ್ಚಿಸಲಾಗುತ್ತಿದೆ” ಎಂದು ಸೇನಾ ಹೇಳಿಕೆಯಲ್ಲಿ ತಿಳಿಸಲಾಗಿದೆ.

SCROLL FOR NEXT