ದೇಶ

ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್ ಮುಖರ್ಜಿ ಇನ್ನಿಲ್ಲ

Lingaraj Badiger

ನವದೆಹಲಿ: ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದ ಮಾಜಿ ರಾಷ್ಟ್ರಪತಿ, ಭಾರತ ರತ್ನ ಪ್ರಣಬ್ ಮುಖರ್ಜಿ ಅವರು ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮೃತಪಟ್ಟಿದ್ದಾರೆ.

ಕಳೆದ 20 ದಿನಗಳಿಂದ ದೆಹಲಿಯ ಆರ್ ಆರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 84 ವರ್ಷದ ಪ್ರಣಬ್ ಮುಖರ್ಜಿ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ ಎಂದು ಅವರ ಪುತ್ರ ಅಭಿಜಿತ್ ಅವರ ಟ್ವೀಟ್ ಮೂಲಕ ತಿಳಿಸಿದ್ದಾರೆ.

"ಅತ್ಯಂತ ಭಾರವಾದ ಮನಸಿನಿಂದ ಈ ವಿಷಯ ತಿಳಿಸುತ್ತಿದ್ದೇನೆ, ನನ್ನ ತಂದೆ ಶ್ರೀ ಪ್ರಣಬ್ ಮುಖರ್ಜಿ ಅವರು ಆರ್ ಆರ್ ಆಸ್ಪತ್ರೆಯ ವೈದ್ಯರ ಉತ್ತಮ ಪ್ರಯತ್ನಗಳು ಮತ್ತು ದೇಶಾದ್ಯಂತ ಜನರ ಪ್ರಾರ್ಥನೆಗಳ ಹೊರತಾಗಿಯೂ ಬದುಕುಳಿಯಲಿಲ್ಲ ಎಂದು ಅಭಿಜಿತ್ ಅವರು ಟ್ವೀಟ್ ಮಾಡಿದ್ದಾರೆ.

ಶ್ವಾಸಕೋಶದ ಸೋಂಕಿನಿಂದ ಪ್ರಣಬ್ ಮುಖರ್ಜಿ ಆಗಸ್ಟ್ 10ರಂದು ದೆಹಲಿಯ ಸೇನಾ ಸಂಶೋಧನೆ ಮತ್ತು ರೆಫರಲ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರ ಮೂತ್ರಪಿಂಡದಲ್ಲೂ ಸಮಸ್ಯೆಯಾಗಿದೆ. ದಿನಕಳೆದಂತೆ ಪ್ರಣಬ್  ಮುಖರ್ಜಿ ಅವರ ಆರೋಗ್ಯ ಕ್ಷೀಣಿಸುತ್ತಾ ಹೋಗಿತ್ತು.

ಪ್ರಣಬ್ ಮುಖರ್ಜಿ ಅವರ ಮೆದುಳಿನಲ್ಲಿ ರಕ್ತ ಹೆಪ್ಪುಗಟ್ಟಿದ್ದರಿಂದ ಸೇನಾ ಆಸ್ಪತ್ರೆಯಲ್ಲಿ ಅವರಿಗೆ ಆಪರೇಷನ್ ಮಾಡಲಾಗಿತ್ತು. ಬಳಿಕ ಅವರ ಆರೋಗ್ಯ ತೀವ್ರ ಹದಗೆಟ್ಟಿತ್ತು.

SCROLL FOR NEXT