ದೇಶ

'ದೆಹಲಿ ಚಲೋ': ಇಂದು ಅಪರಾಹ್ನ ಕೇಂದ್ರ ಸರ್ಕಾರದೊಂದಿಗೆ ಸಭೆ, ಕೆಎಂಎಸ್ ಸಿ ಹೊರತುಪಡಿಸಿ ಬೇರೆ ಸಂಘಟನೆಗಳು ಭಾಗಿ

Sumana Upadhyaya

ಚಂಡೀಗಢ: ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ದೆಹಲಿ ಚಲೋ ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು, ಕೇಂದ್ರ ಸರ್ಕಾರದ ಮನವಿ ಮೇರೆಗೆ ರೈತ ಸಂಘಟನೆಗಳು ಮಾತುಕತೆಗೆ ಮುಂದಾಗಿವೆ.

ಇಂದು ಮಾತುಕತೆ ನಡೆಸಲು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೊಮರ್ ರೈತ ಸಂಘಟನೆಗಳನ್ನು ಆಹ್ವಾನಿಸಿದ್ದರು, ಕೋವಿಡ್-19 ಸಾಂಕ್ರಾಮಿಕ ಮತ್ತು ಚಳಿಯ ವಾತಾವರಣ ದೆಹಲಿಯಲ್ಲಿ ತೀವ್ರವಾಗಿರುವ ಹಿನ್ನೆಲೆಯಲ್ಲಿ ನಾಡಿದ್ದು 3ನೇ ತಾರೀಕಿನ ಬದಲು ಇಂದೇ ಮಾತುಕತೆ ನಡೆಯುತ್ತಿದೆ.

ಇಂದು ಅಪರಾಹ್ನ 3 ಗಂಟೆಗೆ ಮಾತುಕತೆಗೆ ಕರೆದಿದ್ದು ನಾವು ಒಪ್ಪಿಕೊಂಡಿದ್ದೇವೆ. ಪ್ರತಿಭಟನಾ ನಿರತ ರೈತರ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ ಎಂದು ರೈತ ಮುಖಂಡ ಬಲ್ಜೀತ್ ಸಿಂಗ್ ಮಹಲ್ ತಿಳಿಸಿದ್ದಾರೆ.

ಕಳೆದ 6 ದಿನಗಳಿಂದ ಸಾವಿರಾರು ಮಂದಿ ರೈತರು ದೆಹಲಿಯ ಗಡಿಭಾಗದಲ್ಲಿ ಬೀಡುಬಿಟ್ಟಿದ್ದಾರೆ. ಅದರಿಂದಾಚೆ ರಾಜಧಾನಿಗೆ ಹೋಗಲು ಅವರಿಗೆ ಸಾಧ್ಯವಾಗಿಲ್ಲ. ಕೇಂದ್ರ ಸರ್ಕಾರದ ನೂತನ ಕೃಷಿ ಮಸೂದೆಯಿಂದ ಕನಿಷ್ಠ ಬೆಂಬಲ ಬೆಲೆ ವ್ಯವಸ್ಥೆ ಮತ್ತು ಕಾರ್ಪೊರೇಟ್ ಕೃಷಿಯ ಕಪಿಮುಷ್ಠಿಗೆ ಸಿಲುಕಿದಂತಾಗುತ್ತದೆ ಎಂಬುದು ರೈತರ ಆರೋಪವಾಗಿದೆ.

ಇಂದು ಅಪರಾಹ್ನ 3 ಗಂಟೆಗೆ ದೆಹಲಿಯ ವಿಜ್ಞಾನ ಭವನದಲ್ಲಿ ಸಭೆ ನಡೆಯಲಿದ್ದು ಪಂಜಾಬ್ ಮೂಲದ ರೈತ ಸಂಘಟನೆ ಕಿಸಾನ್ ಮಜ್ದೂರ್ ಸಂಘರ್ಷ ಸಮಿತಿ(ಕೆಎಂಎಸ್ ಸಿ) ಹೊರತುಪಡಿಸಿ ಬೇರೆಲ್ಲಾ ಸಂಘಟನೆಗಳು, ರೈತ ಸಂಘಟನೆಯ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಲಿದ್ದಾರೆ. 

ಕೆಎಂಎಸ್ ಸಿ ಪಂಜಾಬ್ ರೈತರ 32 ರೈತ ಸಂಘಟನೆಗಳ ಪೈಕಿ ಒಂದಾಗಿದ್ದು, ಕೇಂದ್ರ ಸರ್ಕಾರ ಮಾತುಕತೆಗೆ ಆಹ್ವಾನಿಸಿತ್ತು. ಹಲವಾರು ರೈತರ ಸಂಸ್ಥೆಗಳ ಸಮಿತಿಯನ್ನು ಆಹ್ವಾನಿಸಲಾಗಿಲ್ಲ ಮತ್ತು ಪ್ರಧಾನಿ ಈ ಸಭೆಯನ್ನು ನಡೆಸುತ್ತಿಲ್ಲ. ಈ ಕಾರಣಗಳಿಂದಾಗಿ, ಕೆಎಂಎಸ್ಸಿ ಸಭೆಗೆ ಹಾಜರಾಗುವುದಿಲ್ಲ ಎಂದು ಕೆಎಂಎಸ್ ಸಿ ಪ್ರಧಾನ ಕಾರ್ಯದರ್ಶಿ ಸರ್ವನ್ ಸಿಂಗ್ ಪಂಧರ್ ತಿಳಿಸಿದ್ದಾರೆ.

SCROLL FOR NEXT