ದೇಶ

ರಾಜಕೋಟ್ ಕೋವಿಡ್-19 ಆಸ್ಪತ್ರೆಯಲ್ಲಿ ಬೆಂಕಿ ಅವಘಡ: ಮೂವರು ಹಿರಿಯ ಅಧಿಕಾರಿಗಳ ಬಂಧನ

Sumana Upadhyaya

ಅಹ್ಮದಾಬಾದ್: ಗುಜರಾತ್ ನ ರಾಜಕೋಟ್ ಜಿಲ್ಲೆಯ ಕೋವಿಡ್-19 ಆಸ್ಪತ್ರೆಯಲ್ಲಿ ಬೆಂಕಿ ಅವಘಡವಾಗಿ 5 ಮಂದಿ ರೋಗಿಗಳು ಮೃತಪಟ್ಟ ಘಟನೆಗೆ ಸಂಬಂಧಪಟ್ಟಂತೆ ಪೊಲೀಸರು ಕಂಪೆನಿಯ ಮೂವರು ಹಿರಿಯ ಅಧಿಕಾರಿಗಳನ್ನು ಬಂಧಿಸಿದ್ದಾರೆ.

ಕಳೆದ ಶುಕ್ರವಾರ ಮಧ್ಯರಾತ್ರಿ 12.30ರ ಸುಮಾರಿಗೆ ಈ ದುರ್ಘಟನೆ ಸಂಭವಿಸಿದ್ದು, ರಾಜಕೋಟ್ ನ ಉದಯ್ ಶಿವಾನಂದ್ ಆಸ್ಪತ್ರೆಯಲ್ಲಿ ಕೋವಿಡ್-19 ರೋಗಿಗಳು ಚಿಕಿತ್ಸೆ ಪಡೆಯುತ್ತಿರುವ ಐಸಿಯುನಲ್ಲಿ ಬೆಂಕಿ ಅವಘಡವುಂಟಾಗಿ ಐವರು ರೋಗಿಗಳು ಮೃತಪಟ್ಟಿದ್ದರು. ನಂತರ ಅಗ್ನಿಶಾಮಕ ಸಿಬ್ಬಂದಿ ಬಂದು 28 ರೋಗಿಗಳನ್ನು ಕಾಪಾಡಿದ್ದರು.

ಕಳೆದ ಭಾನುವಾರ ಪೊಲೀಸರು ಗೋಕುಲ್ ಹೆಲ್ತ್ ಕೇರ್ ಪ್ರೈವೆಟ್ ಲಿಮಿಟೆಡ್ ನ ಐವರು ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಈ ಖಾಸಗಿ ಕಂಪೆನಿ ಆಸ್ಪತ್ರೆಯನ್ನು ನಿರ್ವಹಿಸುತ್ತಿದ್ದು ನಿರ್ಲಕ್ಷ್ಯತನ ಮತ್ತು ಬೇಜವಾಬ್ದಾರಿ ಆರೋಪದಡಿ ಭಾರತೀಯ ದಂಡ ಸಂಹಿತೆ ಸೆಕ್ಷನ್ 304-ಎ ಅಡಿ ಕೇಸು ದಾಖಲಿಸಿದ್ದಾರೆ.

ಈ ಬೆಳವಣಿಗೆ ನಂತರ ಪೊಲೀಸರು ಕಂಪೆನಿಯ ಅಧ್ಯಕ್ಷ ಡಾ ಪ್ರಕಾಶ್ ಮೊದ, ಅವರ ಪುತ್ರ ಮತ್ತು ಕಾರ್ಯಕಾರಿ ನಿರ್ದೇಶಕ ಡಾ ವಿಶಾಲ್ ಮೊದ, ನಿರ್ದೇಶಕ ಡಾ ತೇಜಸ್ ಕರಮ್ತ ಅವರನ್ನು ಕಳೆದ ರಾತ್ರಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಬಂಧಿಸಲಾಗಿದೆ ಎಂದು ರಾಜಕೋಟ್ ಮಾಲ್ವಿಯ ನಗರ ಪೊಲೀಸರು ತಿಳಿಸಿದ್ದಾರೆ.

ಈ ಮೂವರು ಹಾಗೂ ಮತ್ತಿಬ್ಬರು ಸೇರಿದಂತೆ 5 ಮಂದಿ ವಿರುದ್ಧ ಭಾರತೀಯ ದಂಡ ಸಂಹಿತೆ ಅಡಿಯಲ್ಲಿ ಕೇಸು ದಾಖಲಿಸಲಾಗಿದೆ. 

SCROLL FOR NEXT