ದೇಶ

ಮದ್ರಾಸ್ ಹೈಕೋರ್ಟ್ ನಲ್ಲಿ ದೇಶದ ಹೈಕೋರ್ಟ್ ಗಳಲ್ಲೇ ಅತಿ ಹೆಚ್ಚು ಮಹಿಳಾ ನ್ಯಾಯಾಧೀಶರು

Lingaraj Badiger

ಚೆನ್ನೈ: ನಾಲ್ಕು ಮಹಿಳಾ ನ್ಯಾಯಾಧೀಶರು ಸೇರಿದಂತೆ 10 ಹೊಸ ಹೆಚ್ಚುವರಿ ನ್ಯಾಯಾಧೀಶರಿಗೆ ಮದ್ರಾಸ್ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಪಿ ಸಾಹಿ ಅವರು ಗುರುವಾರ ಪ್ರಮಾಣ ವಚನ ಬೋಧಿಸಿದ್ದು, ಇದರೊಂದಿಗೆ, ಹೈಕೋರ್ಟ್ ನ್ಯಾಯಾಧೀಶರ ಸಂಖ್ಯೆ 53 ರಿಂದ 63ಕ್ಕೆ ಏರಿದೆ. ಈ ಪೈಕಿ 13 ಮಹಿಳಾ ನ್ಯಾಯಾಧೀಶರಿದ್ದು, ದೇಶದ ಹೈಕೋರ್ಟ್‌ಗಳಲ್ಲಿ ಅತಿ ಹೆಚ್ಚು ಮಹಿಳಾ ನ್ಯಾಯಾಧೀಶರನ್ನು ಹೊಂದಿದೆ ಗೌರವಕ್ಕೆ ಪಾತ್ರವಾಗಿದೆ.

ಇಂದು ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾಯಮೂರ್ತಿ ಮುರಳಿ ಶಂಕರ್ ಕುಪ್ಪುರಾಜು ಮತ್ತು ನ್ಯಾಯಮೂರ್ತಿ ತಮಿಳ್ ಸೆಲ್ವಿ ಟಿ ವಲಯಪಾಲಯ ಅವರು ದಂಪತಿಗಳಾಗಿರುವುದು ಮತ್ತೊಂದು ವಿಶೇಷ.

ಹೊಸ ಹೆಚ್ಚುವರಿ ನ್ಯಾಯಾಧೀಶರನ್ನು ಸ್ವಾಗತಿಸಿದ ಅಡ್ವೊಕೇಟ್ ಜನರಲ್ ವಿಜಯ್ ನಾರಾಯಣ್ ಅವರು, ಮದ್ರಾಸ್ ಹೈಕೋರ್ಟ್‌ನಲ್ಲಿ ದಂಪತಿಗಳು ಒಂದೇ ದಿನ ಪ್ರಮಾಣ ವಚನ ಸ್ವೀಕರಿಸುತ್ತಿರುವುದು ಇದೇ ಮೊದಲು ಎಂದು ಹೇಳಿದರು. ಅಲ್ಲದೆ ನ್ಯಾಯಾಲಯದಲ್ಲಿ ಉಳಿದಿರುವ ಎಲ್ಲಾ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕೆಂದು ಅವರು ಒತ್ತಿ ಹೇಳಿದರು.

ತಿರುಚಿ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶರಾಗಿದ್ದ ಮುರಳಿಶಂಕರ್ ಮತ್ತು ಮದ್ರಾಸ್ ಹೈಕೋರ್ಟ್‌ನ ಮಧುರೈ ಪೀಠದ ರಿಜಿಸ್ಟ್ರಾರ್(ನ್ಯಾಯಾಂಗ) ಆಗಿದ್ದ ತಮಿಳ್ ಸೆಲ್ವಿ ಅವರು 1996 ರಲ್ಲಿ ಮದುವೆಯಾಗಿದ್ದು, ಈಗ ಇಬ್ಬರು ಮದ್ರಾಸ್ ಹೈಕೋರ್ಟ್ ನ್ಯಾಯಾಧೀಶರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.

SCROLL FOR NEXT