ದೇಶ

ಪಿಎಫ್ ಐ ಸಂಘಟನೆ ಅಧ್ಯಕ್ಷ, ಪದಾಧಿಕಾರಿಗಳ ಕಚೇರಿಗಳ ಮೇಲೆ ಇಡಿ ದಾಳಿ

Lingaraj Badiger

ನವದೆಹಲಿ: ಜಾರಿ ನಿರ್ದೇಶನಾಲಯ(ಇಡಿ)ದ ಅಧಿಕಾರಿಗಳು ಕರ್ನಾಟಕ, ಸೇರಿದಂತೆ 9 ರಾಜ್ಯಗಳ 26 ಸ್ಥಳಗಳಲ್ಲಿರುವ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಕಚೇರಿ ಮತ್ತು ಪದಾಧಿಕಾರಿಗಳ ಮನೆ ಮೇಲೆ ಗುರುವಾರ ದಾಳಿ ನಡೆಸಿ ಶೋಧ ಕಾರ್ಯ ನಡೆಸಿದ್ದಾರೆ.

ಕೇರಳ, ತಮಿಳುನಾಡು, ಬಿಹಾರ, ಉತ್ತರ ಪ್ರದೇಶ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ರಾಜಸ್ತಾನ ಮತ್ತು ದೆಹಲಿಯಲ್ಲಿ ದಾಳಿ ಮಾಡಲಾಗಿದೆ.

ಅಕ್ರಮ ಹಣಕಾಸು ವರ್ಗಾವಣೆ ವರ್ಗಾವಣೆ ಆರೋಪದ ಮೇರೆಗೆ ಇಡಿ ಅಧಿಕಾರಿಗಳ ತಂಡ ದಾಳಿ ನಡೆಸಿದೆ. ಅಕ್ರಮ ಹಣಕಾಸಿನ ವಹಿವಾಟುಗಳಿಗೆ ಸಂಬಂಧಿಸಿದ ಸಾಕ್ಷ್ಯಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲು ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ.

ಕೇರಳದಲ್ಲಿ ಮಲಪ್ಪುರ ಮತ್ತು ತಿರುವನಂತಪುರ ಜಿಲ್ಲೆಗಳಲ್ಲಿ ಪಿಎಫ್ಐ ಮುಖ್ಯಸ್ಥ ಒಎಂಎ ಸಲಾಮ್ ಮತ್ತು ರಾಷ್ಟ್ರೀಯ ಕಾರ್ಯದರ್ಶಿ ನಸುರುದ್ದೀನ್ ಎಲಮರಂ ಅವರ ಮನೆಗಳಲ್ಲೂ ಅಧಿಕಾರಿಗಳು ಶೋಧ ಕಾರ್ಯ ನಡೆಸಿದ್ದಾರೆ.

ಪಿಎಫ್ಐ ಕೇರಳದಲ್ಲಿ 2006ರಲ್ಲಿ ಸ್ಥಾಪನೆಗೊಂಡಿದ್ದು, ಕೇಂದ್ರ ಕಚೇರಿ ದೆಹಲಿಯಲ್ಲಿದೆ. ಈ ಸಂಘಟನೆಗೂ ಭೀಮ್ ಆರ್ಮಿಗೂ ಹಣಕಾಸಿನ ವ್ಯವಹಾರ ನಡೆದ ಬಗ್ಗೆ ದಾಖಲೆಗಳು ಇಡಿ ಅಧಿಕಾರಿಗಳಿಗೆ ದೊರಕಿದ್ದವು. ಈ ಎರಡೂ ಸಂಘಟನೆಗಳು ಸಿಎಎ ವಿರೋಧಿ ಪ್ರತಿಭಟನೆ ಹಿಂದೆ ಸಾಕಷ್ಟು ಕೆಲಸ ಮಾಡಿವೆ ಎಂಬ ಆರೋಪ ಇದೆ.

SCROLL FOR NEXT