ದೇಶ

ದೆಹಲಿ: ರೈತರ ಪ್ರತಿಭಟನೆ ವೇಳೆ ಮತ್ತೋರ್ವ ರೈತನ ಸಾವು, ಹೃದಯಾಘಾತದಿಂದ 57 ವರ್ಷದ ಲಖ್ವೀರ್ ಸಿಂಗ್ ನಿಧನ

Srinivasamurthy VN

ನವದೆಹಲಿ: ಕೇಂದ್ರ ಸರ್ಕಾರದ ವಿವಾದಿತ ಕೃಷಿ ಮಸೂದೆಯನ್ನು ವಿರೋಧಿಸಿ ರಾಜಧಾನಿ ದೆಹಲಿಯಲ್ಲಿ ನಡೆಯುತ್ತಿರುವ ಪ್ರತಿಭಟನೆ 8ನೇ ದಿನಕ್ಕೆ ಕಾಲಿಟ್ಟಿರುವಂತೆಯೇ ರೈತರ ಸಾವಿನ ಸರಣಿ ಕೂಡ ಮುಂದುವರೆದಿದೆ.

ನಿನ್ನೆಯಷ್ಟೇ ದೆಹಲಿಯಲ್ಲಿ ಪ್ರತಿಭಟನಾ ನಿರತ ರೈತರಿಬ್ಬರು ಸಾವನ್ನಪ್ಪಿದ್ದರು. ಪಂಜಾಬ್ ನ ಮಾನ್ಸಾದ ಬಚೋವಾನಾ ಗ್ರಾಮದ ಗುರ್ಜಂತ್ ಸಿಂಗ್ ದೆಹಲಿಯಲ್ಲಿ ಸಾವನ್ನಪ್ಪಿದ್ದರೆ, ಮೊಗಾ ಜಿಲ್ಲೆಯ ಭಿಂದರ್ ಖುರ್ದ್ ಗ್ರಾಮದ ಗುರ್ಬಚನ್ ಸಿಂಗ್ (80 ವರ್ಷ) ಬುಧವಾರ ಮೊಗಾದಲ್ಲಿ ನಡೆದ ಪ್ರತಿಭಟನೆಯ ಸಂದರ್ಭದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಮತ್ತೋರ್ವ ರೈತ ಹೃದಯಾಘಾತದಿಂದ ಸಾವನಪ್ಪಿದ್ದಾರೆ.

ದೆಹಲಿಯ ಟಿಕ್ರಿ ಗಡಿಯಲ್ಲಿ ರೈತರು ಪ್ರತಿಭಟನೆ ನಡೆಸಿದ್ದು, ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ರೈತ ಲಖ್ವೀರ್ ಸಿಂಗ್ ಹೃದಯಾಘಾತಕ್ಕೆ ಒಳಗಾಗಿ ಸಾವನ್ನಪ್ಪಿದ್ದಾರೆ. ಮೃತ ಲಖ್ವೀರ್ ಸಿಂಗ್ ಬತಿಂಡಾ ಗ್ರಾಮ ನಿವಾಸಿಯಾಗಿದ್ದು, ಪ್ರತಿಭಟನೆಯಲ್ಲಿ ಇವರು ಬಿಕೆಯು ಸಂಘಟನೆಯನ್ನು ಪ್ರತಿನಿಧಿಸತ್ತಿದ್ದರು ಎಂದು ತಿಳಿದುಬಂದಿದೆ.

ಇನ್ನು ರಾಷ್ಟ್ರ ರಾಜಧಾನಿಯಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ವೇಳೆ ಸಾವನ್ನಪ್ಪಿದವರ ಸಂಖ್ಯೆ 6ಕ್ಕೆ ಏರಿಕೆಯಾಗಿದ್ದು, ಇದಕ್ಕೂ ಮೊದಲು ಅಂದರೆ ನವೆಂಬರ್ 27ರಂದು 45 ವರ್ಷದ ಧನ್ನಾಸಿಂಗ್ ಸಾವನ್ನಪ್ಪಿದ್ದರು. ಪ್ರತಿಭಟನೆ ನಿಮಿತ್ತ ದೆಹಲಿಗೆ ರ್ಯಾಲಿಯಲ್ಲೆ ತೆರಳುತ್ತಿದ್ದ ವೇಳೆ ಸಂಭವಿಸಿದ ಅಪಘಾತದಲ್ಲಿ ಧನ್ನಾಸಿಂಗ್ ಸಾವನ್ನಪ್ಪಿದ್ದರು. ಇದಕ್ಕೂ ಮೊದಲು 55 ವರ್ಷದ ಜನಕ್ ರಾಜ್ ಎಂಬುವರರು ಚಿಕ್ರಿ  ಗಡಿಯಲ್ಲಿ ಕಾರಿನಲ್ಲಿ ಮಲಗಿದ್ದಾಗ ಸಾವನ್ನಪ್ಪಿದ್ದರು. ನಿನ್ನೆ  ಇದೇ ಟಿಕ್ರಿ ಗಡಿಯಲ್ಲಿ ಗಜ್ಜನ್ ಸಿಂಗ್ ಮತ್ತು ಗುರ್ಜಂತ್ ಸಿಂಗ್ ಎಂಬುವವರು ಕೂಡ ಸಾವನ್ನಪ್ಪಿದ್ದರು. 

SCROLL FOR NEXT