ದೇಶ

ಕೇಂದ್ರ ಕೃಷಿ ಕಾಯಿದೆಗಳನ್ನು ಹಿಂಪಡೆಯದಿದ್ದರೆ ದೇಶಾದ್ಯಂತ ಪ್ರತಿಭಟನೆ: ಮಮತಾ ಬ್ಯಾನರ್ಜಿ ಎಚ್ಚರಿಕೆ

Lingaraj Badiger

ಕೋಲ್ಕತಾ: ಕೇಂದ್ರ ಸರ್ಕಾರ ರೈತರ ವಿರೋಧಿ ಹೊಸ ಕೃಷಿ ಕಾಯಿದೆಗಳನ್ನು ಹಿಂಪಡೆಯದಿದ್ದರೆ ದೇಶಾದ್ಯಂತ ಉಗ್ರ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಗುರುವಾರ ಎಚ್ಚರಿಕೆ ನೀಡಿದ್ದಾರೆ.

ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಸರಣಿ ಟ್ವೀಟ್ ಗಳ ಮೂಲಕ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

"ರೈತರ ಮತ್ತು ಅವರ ಜೀವನ ಹಾಗೂ ಜೀವನೋಪಾಯದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ದೀದಿ, ಕೇಂದ್ರ ಸರ್ಕಾರ ರೈತ ವಿರೋಧಿ ಮಸೂದೆಗಳನ್ನು ಹಿಂತೆಗೆದುಕೊಳ್ಳಬೇಕು. ಅವರು ತಕ್ಷಣ ಹಾಗೆ ಮಾಡದಿದ್ದರೆ, ನಾವು ರಾಜ್ಯ ಮತ್ತು ದೇಶದಾದ್ಯಂತ ಆಂದೋಲನ ನಡೆಸುತ್ತೇವೆ. ಮೊದಲಿನಿಂದಲೂ ನಾವು ಈ ರೈತ ವಿರೋಧಿ ಮಸೂದೆಗಳನ್ನು ಬಲವಾಗಿ ವಿರೋಧಿಸುತ್ತಿದ್ದೇವೆ" ಎಂದು ಟ್ವೀಟ್ ಮಾಡಿದ್ದಾರೆ.

ಕೇಂದ್ರ ಸರ್ಕಾರ ಇಂದು ದೆಹಲಿಯಲ್ಲಿ ಪ್ರತಿಭಟನಾನಿರತ ರೈತ ಪ್ರತಿನಿಧಿಗಳೊಂದಿಗೆ ಮತ್ತೊಂದು ಸುತ್ತಿನ ಮಾತುಕತೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮಮತಾ ಬ್ಯಾನರ್ಜಿ ಈ ಟ್ವೀಟ್ ಮಾಡಿದ್ದಾರೆ.

"ನಾವು ಡಿಸೆಂಬರ್ 4, ಶುಕ್ರವಾರದಂದು ಅಖಿಲ ಭಾರತ ತೃಣಮೂಲ ಕಾಂಗ್ರೆಸ್ ಸಭೆ ಕರೆದಿದ್ದೇವೆ. ಅಗತ್ಯ ಸರಕುಗಳ ಕಾಯ್ದೆ ಸಾಮಾನ್ಯ ಜನರ ಮೇಲೆ ಹೇಗೆ ಪರಿಣಾಮ ಬೀರುತ್ತಿದೆ ಮತ್ತು ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಲು ಹೇಗೆ ಕಾರಣವಾಗುತ್ತದೆ ಎಂದು ಚರ್ಚಿಸುತ್ತೇವೆ. ಕೇಂದ್ರ ಸರ್ಕಾರ ಈ ಜನ ವಿರೋಧಿ ಕಾನೂನನ್ನು ಹಿಂತೆಗೆದುಕೊಳ್ಳಬೇಕು" ಎಂದು ದೀದಿ ಮತ್ತೊಂದು ಟ್ವೀಟ್ ನಲ್ಲಿ ಒತ್ತಾಯಿಸಿದ್ದಾರೆ.

SCROLL FOR NEXT