ದೇಶ

ಕೃಷಿ ಕಾಯ್ದೆ ಹಿಂತೆಗೆದುಕೊಂಡರಷ್ಟೇ ರೈತರ ಪ್ರತಿಭಟನೆ ಅಂತ್ಯ: ಅಖಿಲ ಭಾರತ ಕಿಸಾನ್ ಸಭಾ

Srinivas Rao BV

ನವದೆಹಲಿ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ಸಂಪೂರ್ಣವಾಗಿ ಹಿಂತೆಗೆದುಕೊಂಡರಷ್ಟೇ ಪ್ರತಿಭಟನೆ ಅಂತ್ಯಗೊಳಿಸುತ್ತೆವೆ ಎಂದು ಅಖಿಲ ಭಾರತ ಕಿಸಾನ್ ಸಭಾ ಸ್ಪಷ್ಟಪಡಿಸಿದೆ. 

ಪ್ರತಿಭಟನಾ ನಿರತ ರೈತರು ಹಾಗೂ ಸರ್ಕಾರದ ನಡುವೆ ಶನಿವಾರ (ಡಿ.5) ರಂದು 5ನೇ ಸುತ್ತಿನ ಮಾತುಕತೆ ನಡೆಯುವುದಕ್ಕೂ ಮುನ್ನ ಎಐಕೆಎಸ್ ನ ಅಧಿಕಾರಿಯೊಬ್ಬರು ಈ ಹೇಳಿಕೆ ನೀಡಿದ್ದಾರೆ. 

ಪ್ರತಿಭಟನಾ ನಿರತ ರೈತರು ಹಾಗೂ ಸರ್ಕಾರದ ನಡುವೆ ಗುರುವಾರ ನಡೆದ ನಾಲ್ಕನೇ ಹಂತದ ಮಾತುಕತೆ ವಿಫಲಗೊಂಡಿತ್ತು. ಅಂದಿನ ಸಭೆಯಲ್ಲೂ ಕೃಷಿ ಕಾಯ್ದೆಗಳನ್ನು ಹಿಂಪಡೆಯುವಂತೆ ರೈತರು ಪಟ್ಟು ಹಿಡಿದಿದ್ದರು. ಈಗಲೂ ಬಿಗಿ ಪಟ್ಟನ್ನು ಮುಂದುವರೆಸಿರುವ ರೈತರು, ನಾವು ಯಾವುದೇ ಕಾರಣಕ್ಕೂ ಬಗ್ಗುವುದಿಲ್ಲ. ಕೃಷಿ ಕಾಯ್ದೆ ಹಿಂತೆಗೆದುಕೊಂಡರಷ್ಟೇ ನಾವು ಪ್ರತಿಭಟನೆಯನ್ನು ಅಂತ್ಯಗೊಳಿಸುತ್ತೇವೆ ಎಂದು ಹೇಳಿದ್ದಾರೆ. 

"ಸರ್ಕಾರ ಅವರ ಪ್ರಸ್ತಾವನೆಗಳನ್ನು ಸಂಸತ್ ಗೆ ತೆಗೆದುಕೊಂಡುಹೋಗಲಿ, ಸಂಸತ್ ಸಮಿತಿ ಅದರ ಬಗ್ಗೆ ಚರ್ಚೆ ನಡೆಸಲಿ, ಕೃಷಿ ಕಾಯ್ದೆ ರದ್ದುಗೊಳಿಸುವುದಕ್ಕಿಂತ ಕಡಿಮೆಯಾಗಿ ಏನೇ ಮಾಡಿದರೂ ನಾವು ಅದನ್ನು ಒಪ್ಪುವುದಿಲ್ಲ" ಎಂದು ಎಐಕೆಎಸ್ ನ ಹಣಕಾಸು ಕಾರ್ಯದರ್ಶಿ ಕೃಷ್ಣ ಪ್ರಸಾದ್ ಹೇಳಿದ್ದಾರೆ. 

ದೆಹಲಿಯಲ್ಲಿ 9 ದಿನಗಳಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. " ಈ ಹಂತದಲ್ಲಿ ನಮ್ಮೊಂದಿಗೆ ಟ್ರಾನ್ಸ್ಪೋರ್ಟ್ ಯೂನಿಯನ್ ಗಳು ರಿಟೇಲ್ ಉದ್ಯಮಗಳಲ್ಲಿರುವವರು ಹಾಗೂ ಇನ್ನಿತರ ಸಂಘಟನೆಗಳವರು ಇದ್ದಾರೆ, ಅವರು ನಮ್ಮನ್ನು ಬೆಂಬಲಿಸಿದ್ದಾರೆ. ನಮ್ಮ ಪ್ರತಿಭಟನೆ ಕೇವಲ ರೈತರದ್ದಾಗಿಲ್ಲ ಎಂದು ಕೃಷ್ಣ ಪ್ರಸಾದ್ ತಿಳಿಸಿದ್ದಾರೆ.

SCROLL FOR NEXT