ದೇಶ

ಇನ್ನು 3 ವರ್ಷಗಳಲ್ಲಿ ಎಲ್ಲಾ ಹಳ್ಳಿಗಳಿಗೆ ಹೈ ಸ್ಪೀಡ್ ಇಂಟರ್ನೆಟ್ ಸೇವೆ: ಪ್ರಧಾನಿ ನರೇಂದ್ರ ಮೋದಿ 

Sumana Upadhyaya

ನವದೆಹಲಿ: ಮುಂದಿನ ಮೂರು ವರ್ಷಗಳಲ್ಲಿ ಭಾರತದ ಎಲ್ಲಾ ಹಳ್ಳಿಗಳಿಗೆ ಅಧಿಕ ವೇಗದ ಫೈಬರ್ ಡಾಟಾ ಇಂಟರ್ನೆಟ್ ಸಂಪರ್ಕ ಸೇವೆಯನ್ನು ಒದಗಿಸಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. 

ಭಾರತೀಯ ಮೊಬೈಲ್ ಕಾಂಗ್ರೆಸ್(ಐಎಂಸಿ)2020ನ್ನು ವಿಡಿಯೊ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಮೂರು ವರ್ಷಗಳಲ್ಲಿ ದೇಶದ ಪ್ರತಿ ಹಳ್ಳಿಗೆ ಅಧಿಕ ವೇಗದ ಫೈಬರ್ ಆಪ್ಟಿಕ್ ಡಾಟಾ ಸಂಪರ್ಕ ಸೇವೆಯನ್ನು ಒದಗಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು. 

ಮೊಬೈಲ್ ಉತ್ಪಾದನೆಯಲ್ಲಿ ಭಾರತ ದೇಶ ಅತ್ಯಂತ ಪ್ರಶಸ್ತನೀಯ ಸ್ಥಳವಾಗಿ ಮೂಡುತ್ತಿದ್ದು, ಭಾರತದ ಡಿಜಿಟಲ್ ತಂತ್ರಜ್ಞಾನ ವೇಗವಾಗಿ ಬೆಳೆಯುತ್ತಿದೆ. ಈ ಸಮಯದಲ್ಲಿ ಇಂಟರ್ನೆಟ್, ಮೊಬೈಲ್ ಸಂಪರ್ಕ ಸೇವೆ ಪ್ರಮುಖವಾಗಿದೆ. ನಾವು ಈಗಾಗಲೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪವನ್ನು ಫೈಬರ್ ಆಪ್ಟಿಕ್ ಕೇಬಲ್ ನೊಂದಿಗೆ ಜೋಡಿಸಿದ್ದೇವೆ. ದೇಶದ ಹಲವು ಜಿಲ್ಲೆಗಳಲ್ಲಿ, ಈಶಾನ್ಯ ರಾಜ್ಯಗಳಲ್ಲಿ, ಲಕ್ಷದ್ವೀಪಗಳಲ್ಲಿ, ಫಿಕ್ಸ್ ಲೈನ್ ಬ್ರಾಡ್ ಬಾಂಡ್ ಸೇವೆಗಳನ್ನು ಮತ್ತು ಸಾರ್ವಜನಿಕ ವೈಫೈ ಹಾಟ್ ಸ್ಪಾಟ್ ಗಳನ್ನು ನೀಡಲು ಸರ್ಕಾರ ಉತ್ಸುಕವಾಗಿದೆ ಎಂದರು. 

ಎಲೆಕ್ಟ್ರಾನಿಕ್ ತ್ಯಾಜ್ಯಗಳನ್ನು ಸದ್ಬಳಕೆ ಮಾಡಿ: ಎಲೆಕ್ಟ್ರಾನಿಕ್ ತ್ಯಾಜ್ಯ ವಸ್ತುಗಳನ್ನು ನಿರ್ವಹಿಸಲು ಕಾರ್ಯಪಡೆಯನ್ನು ರಚಿಸುವಂತೆ ಉದ್ಯಮಗಳು ಮತ್ತು ಕೈಗಾರಿಕೆಗಳನ್ನು ಈ ಸಂದರ್ಭದಲ್ಲಿ ಒತ್ತಾಯಿಸಿದ ಪ್ರಧಾನಿ, ತಂತ್ರಜ್ಞಾನ ಅಭಿವೃದ್ಧಿ ಹೊಂದುತ್ತಿದ್ದಂತೆ ಹ್ಯಾಂಡ್ ಸೆಟ್ ಮತ್ತು ಗ್ಯಾಜೆಟ್ ಗಳನ್ನು ಜನರು ಆಗಾಗ ಬದಲಿಸುತ್ತಿರುವಾಗ ಅವುಗಳ ಬದಲಿ ವ್ಯವಸ್ಥೆಯನ್ನು ನಿರ್ವಹಿಸಲು ಸರ್ಕುಲರ್ ಎಕಾನಮಿಯನ್ನು ರಚಿಸಬೇಕು ಎಂದು ಸಲಹೆ ನೀಡಿದರು. 

ತಂತ್ರಜ್ಞಾನ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವಾಗ ಕೈಗಾರಿಕೆಗಳು ಮತ್ತು ಸರ್ಕಾರ ಜೊತೆಜೊತೆಯಾಗಿ ಕೆಲಸ ಮಾಡುತ್ತಾ ದೇಶದಲ್ಲಿ ಆದಷ್ಟು ಶೀಘ್ರ 5ಜಿ ಇಂಟರ್ನೆಟ್ ಸಂಪರ್ಕ ಸೇವೆಗೆ ಕೆಲಸ ಮಾಡಬೇಕು. ಮೊಬೈಲ್ ತಂತ್ರಜ್ಞಾನದಿಂದಾಗಿಯೇ ಇಂದು ಕೋಟ್ಯಂತರ ಜನರಿಗೆ ಸರ್ಕಾರದ ಯೋಜನೆಗಳ ಫಲ ಪಡೆಯುವಂತಾಗಿದೆ, ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ವಹಿವಾಟುಗಳಿಗೆ, ಜನಜೀವನಕ್ಕೆ ಜನರಿಗೆ ಸಹಾಯವಾಗಿದೆ. ನಗದುರಹಿತ ವಹಿವಾಟಿಗೆ, ಅಗತ್ಯ ಸೇವೆಗಳ ಸಂಪರ್ಕಕ್ಕೆ ಜನತೆಗೆ ಇಂಟರ್ನೆಟ್, ಮೊಬೈಲ್ ತಂತ್ರಜ್ಞಾನಗಳಲ್ಲಿರುವ ಆಪ್ ಗಳು ಸಾಕಷ್ಟು ಸಹಾಯ ಮಾಡುತ್ತಿವೆ ಎಂದರು. 

SCROLL FOR NEXT