ನವದೆಹಲಿ: ಸರ್ಕಾರಿ ಭೂಮಿಯಲ್ಲಿರುವವರಿಗೆ ಹಕ್ಕು ಸ್ವಾಮ್ಯ ನೀಡುವುದರ ರೋಷ್ನಿ ಕಾಯ್ದೆಯನ್ನು ರದ್ದುಗೊಳಿಸಿದ ಆದೇಶವನ್ನು ಮರುಪರಿಶೀಲಿಸುವುದಕ್ಕೆ ಕೇಳಿರುವ ಅರ್ಜಿಯ ಕುರಿತು ಡಿ.21 ರ ವೇಳೆಗೆ ನಿರ್ಧರಿಸುವಂತೆ ಸುಪ್ರೀಂ ಕೋರ್ಟ್ ಜಮ್ಮು-ಕಾಶ್ಮೀರ ಹೈಕೋರ್ಟ್ ಸೂಚನೆ ನೀಡಿದೆ.
ಹೈಕೋರ್ಟ್ ನ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು ಜನವರಿ ಕೊನೆಯ ವಾರದಲ್ಲಿ ವಿಚಾರಣೆ ನಡೆಸುವುದಾಗಿ ಸುಪ್ರೀಂ ಕೋರ್ಟ್ ಹೇಳಿದೆ.
ನ್ಯಾ.ಎನ್ ವಿ ರಮಣ ಪೀಠದ ಎದುರು ಜಮ್ಮು-ಕಾಶ್ಮೀರದ ಆಡಳಿತದ ಪರವಾಗಿ ಹಾಜರಾದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕೋರ್ಟ್ ಮೊರೆ ಹೋಗಿರುವವರು ಭೂಕಬಳಿಕೆ ಅಥವಾ ಅನಧಿಕೃತ ವ್ಯಕ್ತಿಗಳಲ್ಲದ ಕಾರಣ ಅವರ ವಿರುದ್ಧ ಯಾವುದೇ ಕ್ರಮವನ್ನೂ ಕೈಗೊಳ್ಳುವುದಿಲ್ಲ ಎಂದು ಮೌಖಿಕ ಭರವಸೆ ನೀಡಿದ್ದಾರೆ.
ಜಮ್ಮು-ಕಾಶ್ಮೀರ ಕೇಂದ್ರಾಡಳಿತ ಪ್ರದೇಶ ಈಗಾಗಲೇ ಮರುಪರಿಶೀಲನಾ ಅರ್ಜಿ ಸಲ್ಲಿಸಿದೆ ಎಂದೂ ಮೆಹ್ತಾ ಕೋರ್ಟ್ ಗೆ ತಿಳಿಸಿದ್ದಾರೆ.
ರೋಷ್ನಿ ಕಾಯ್ದೆಯನ್ನು ಅಕ್ರಮ, ಸಂವಿಧಾನ ವಿರೋಧಿ ಎಂದು ಹೇಳಿದ್ದ ಜಮ್ಮು-ಕಾಶ್ಮೀರ ಹೈಕೋರ್ಟ್ ಈ ಕಾಯ್ದೆಯಡಿ ಭೂಮಿ ಮಂಜೂರು ಮಾಡಿರುವುದಕ್ಕೆ ಸಂಬಂಧಿಸಿದಂತೆ ಅ.9 ರಂದು ಸಿಬಿಐ ತನಿಖೆಗೆ ಆದೇಶಿಸಿತ್ತು. ಸರ್ಕಾರಿ ಭೂಮಿಯಲ್ಲಿದ್ದವರಿಗೆ ಹಕ್ಕು ಪತ್ರ ವಿತರಣೆ ಹಾಗೂ ವಿದ್ಯುತ್ ಯೋಜನೆಗಳಿಗೆ ಹಣಕಾಸು ಒದಗಿಸಲು ಸಂಪನ್ಮೂಲಗಳನ್ನು ಉತ್ಪಾದಿಸುವ ಉದ್ದೇಶದಿಂದ 2001 ರಲ್ಲಿ ರೋಷ್ನಿ ಕಾಯ್ದೆಯನ್ನು ಜಾರಿಗೊಳಿಸಲಾಗಿತ್ತು.